ದಾಳಿಗೆ 20 ವರ್ಷ: ಒಗ್ಗಟ್ಟಿಗಾಗಿ ಕರೆ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಶನಿವಾರ, 11 ಸೆಪ್ಟಂಬರ್ 2021 (11:28 IST)
ವಾಷಿಂಗ್ಟನ್ : ಅಮೆರಿಕದ ನ್ಯೂಯಾರ್ಕ್ ಮೇಲೆ ಅಲ್-ಖೈದಾ ಉಗ್ರರು 2001ರಲ್ಲಿ ನಡೆಸಿದ ದಾಳಿಗೆ ಇಂದು (ಸೆಪ್ಪೆಂಬರ್ 11) 20 ವರ್ಷ ಪೂರ್ಣಗೊಂಡಿದೆ. ದಾಳಿ ವೇಳೆ ಮೃತಪಟ್ಟವರನ್ನು ಸ್ಮರಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಒಗ್ಗಟ್ಟಿಗಾಗಿ ಕರೆ ನೀಡಿದ್ದಾರೆ.

ʼ2001ರ ಸೆಪ್ಪೆಂಬರ್ 11ರಂದು ನ್ಯೂಯಾರ್ಕ್ ಸಿಟಿ, ಅರ್ಲಿಂಗ್ಟನ್, ವರ್ಜಿನಿಯಾ, ಪೆನ್ಸಿಲ್ವೇನಿಯಾ ಮತ್ತು ಶಾಂಕ್ಸ್ವಿಲ್ಲೆಯಲ್ಲಿ 90 ದೇಶಗಳ 2,977 ಜನರು ಮೃತಪಟ್ಟಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ನಿಮ್ಮನ್ನು ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ಅಮೆರಿಕ ಸ್ಮರಿಸುತ್ತದೆʼ ಎಂದು ಹೇಳಿರುವ ವಿಡಿಯೊವೊಂದನ್ನು ಬೈಡನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂತಹ ಹೀನಾಯ ಸಂದರ್ಭದಲ್ಲಿಯೂ ನಾವು ಒಗ್ಗಟ್ಟನ್ನು ಪ್ರದರ್ಶಿಸಿದೆವು. ಅದು ನಮ್ಮ ಅತಿದೊಡ್ಡ ಶಕ್ತಿಯಾಗಿದೆ ಎಂಬುದನ್ನು ಎತ್ತಿ ತೋರಿಸಿದೆವು ಎಂದಿದ್ದಾರೆ. ಮುಂದುವರಿದು, ದಾಳಿ ಬಳಿಕ ತಮ್ಮ ಪ್ರಾಣ ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭದ್ರತಾ ಪಡೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼರಕ್ಷಣೆ, ಚೇತರಿಕೆ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗೆ ತಮ್ಮ ಸರ್ವಸ್ವವನ್ನು ನೀಡಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ವೈದ್ಯರು, ಶುಶ್ರೂಷಕರು, ನಾಯಕರು, ಸ್ವಯಂಸೇವಕರು, ನಿರ್ಮಾಣ ಕೆಲಸಗಾರರು ಮತ್ತು ಪ್ರತಿಯೊಬ್ಬರನ್ನೂ ನಾವು ಗೌರವಿಸುತ್ತೇವೆʼ ಎಂದಿದ್ದಾರೆ.
9/11 ದಾಳಿಯ 20ನೇ ವರ್ಷದ ಅಂಗವಾಗಿ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಅವರು ನ್ಯೂಯಾರ್ಕ್, ಪೆನ್ಸಿಲ್ವೇನಿಯಾ ಮತ್ತು ವರ್ಜಿನಿಯಾಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ. 2001ರ ಸೆಪ್ಪೆಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳಿಗೆ ಅಲ್ಖೈದಾ ಉಗ್ರರು ವಿಮಾನಗಳನ್ನು ನುಗ್ಗಿಸಿದ್ದರು. ಇದು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ