ಧಾರವಾಡ: ಪ್ರಹ್ಲಾದ್ ಜೋಷಿ, ವಿನಯ್ ಕುಲಕರ್ಣಿ ಹಣಾಹಣಿ ಹೋರಾಟ

ಮಂಗಳವಾರ, 8 ಏಪ್ರಿಲ್ 2014 (18:04 IST)
PR
PR
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ನಂತರ ತೀವ್ರ ಚುನಾವಣೆ ಕದನಕ್ಕೆ ವೇದಿಕೆ ಸಿದ್ಧವಾಗಿದೆ. 17 ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿಯ ಪ್ರಹ್ಲಾದ್ ಜೋಷಿ ಮತ್ತು ಕಾಂಗ್ರೆಸ್ ವಿನಯ್ ಕುಲಕರ್ಣಿ ನಡುವೆ ಹಣಾಹಣಿ ಹೋರಾಟ ನಡೆಯಲಿದೆ. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್, ಆಮ್ ಆದ್ಮಿಯ ಹೇಮಂತ್ ಕುಮಾರ್ ಪಾರಂಪರಿಕ ಮತಗಳಲ್ಲಿ ಕೆಲವು ಭಾಗ ಸಿಗಬಹುದು. ಜೋಷಿ ಅವರಿಗೆ ಹ್ಯಾಟ್ರಿಕ್ ದಕ್ಕಿಸಲು ಸಂಘ ಪರಿವಾರ ಮತ್ತು ಬಿಜೆಪಿ ಪೂರ್ಣ ಬಲವನ್ನು ಬಳಸುತ್ತಿದೆ. ಮನೆಯಿಂದ ಮನೆಗೆ ಭೇಟಿ ಮತ್ತು ರೋಡ್ ಶೋಗಳು ದಿನದಿಂದ ದಿನಕ್ಕೆ ಮೆರುಗು ಪಡೆಯುತ್ತಿದೆ. ಜೋಷಿ 2009ನೇ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಕುನ್ನೂರ್ ಅವರನ್ನು 1.37 ಲಕ್ಷ ಮತಗಳ ಭಾರೀ ಅಂತರದಿಂದ ಗೆಲುವು ಗಳಿಸಿದ್ದರು.

ಆದರೆ ಈ ಬಾರಿ ಜೋಷಿಗೆ ಗೆಲವು ಅಷ್ಟು ಸುಲಭವಾಗಿ ಪರಿಣಮಿಸಿಲ್ಲ. ಇಲ್ಲಿನ ಜಯ ಗಳಿಸಿದರೆ ರಾಜಕೀಯದಲ್ಲಿ ಜೋಷಿಯನ್ನು ಉತ್ತುಂಗಕ್ಕೆ ಒಯ್ಯಬಹುದು. ಆದರೆ ಸೋತರೆ ಇನ್ನಿಲ್ಲದ ಹಾನಿ ಮಾಡುವುದು ಖಂಡಿತ. ಒಂದು ಕಡೆ ದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆಯಲ್ಲಿ ಸವಾರಿ ಮತ್ತು ಇನ್ನೊಂದು ಕಡೆ ಯುಪಿಎ ಆಡಳಿತದ ಭ್ರಷ್ಟಾಚಾರ ಜೋಷಿಗೆ ಪ್ಲಸ್ ಪಾಯಿಂಟ್ ಆಗಿವೆ. ಆದರೆ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಜೋಷಿ ತಮ್ಮ ಕ್ಷೇತ್ರಕ್ಕೆ ಭೇಟಿ ಕೊಡುವುದಿಲ್ಲ ಎಂಬ ದೂರು ಈ ಬಾರಿ ಅವರಿಗೆ ವಿರುದ್ಧವಾಗಿ ಕೆಲಸ ಮಾಡಬಹುದು.

PR
PR
ಹುಬ್ಬಳ್ಳಿ ಮೈದಾನದ ಭೂಮಿ ಕಬಳಿಕೆಯಲ್ಲಿ ಜೋಷಿ ಭಾಗಿಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಮುಕ್ತ ಕರೆ ನೀಡಿರುವುದು ಜೋಷಿಗೆ ಹಿನ್ನಡೆಯಾಗಿದೆ. 1996ರಿಂದ ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಕ್ಷೇತ್ರವನ್ನು ಪುನಃ ಕೈವಶ ಮಾಡಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಏಕೈಕ ಗುರಿಯಾಗಿದೆ.
ಜಾತಿ ಲೆಕ್ಕಾಚಾರ
ಧಾರವಾಡ ಲಿಂಗಾಯತ ಪ್ರಾಬಲ್ಯದ ಕ್ಷೇತ್ರವಾಗಿದ್ದರೂ, ಹಿಂದಿನ ವರ್ಷಗಳಲ್ಲಿ ಜಾತಿ ಅಂಶ ಪ್ರಮುಖ ಪಾತ್ರವಹಿಸಿಲ್ಲ.ಆದರೆ ರಾಜಕೀಯ ವಿಶ್ಲೇಷಕರು ಈ ಬಾರಿ ಜಾತಿ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸುತ್ತದೆಂದು ಭಾವಿಸಿದ್ದಾರೆ. ಕುರುಬ, ಅಲ್ಪಸಂಖ್ಯಾತ ಮತ್ತು ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ಲಗ್ಗೆ ಹಾಕಿ ಲಿಂಗಾಯತ ಮತಗಳನ್ನು ವಿಭಜಿಸಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ.

ಈ ಉದ್ದೇಶದಿಂದಲೇ ಪಂಚಮಶಾಲಿ ಲಿಂಗಾಯತ ಅಭ್ಯರ್ಥಿ ಕುಲಕರ್ಣಿಯನ್ನು ಕಣಕ್ಕಿಳಿಸಲಾಗಿದೆ.ಈ ಬಾರಿ ಜೋಷಿ ಮತ್ತು ಕುಲಕರ್ಣಿ ಅವರಿಗೆ 50-50 ಗೆಲುವಿನ ಅವಕಾಶಗಳಿವೆ. ಪರಂಪರಾಗತ ಓಟ್ ಬ್ಯಾಂಕ್‌ ಉಳಿಸಿಕೊಂಡರೆ ಜೋಷಿ ಗೆಲ್ಲಬಹುದು ಮತ್ತು ಜಾತಿ ಲೆಕ್ಕಾಚಾರ ಪರಿಣಾಮ ಬೀರಿದರೆ ಕುಲಕರ್ಣಿ ಗೆಲುವು ಸಾಧಿಸಬಹುದು. ಒಟ್ಟಿನಲ್ಲಿ ಇವರಿಬ್ಬರ ಪೈಕಿ ಯಾರು ಗೆಲ್ಲುತ್ತಾರೆನ್ನುವುದನ್ನು ಮತದಾರನ ಓಟುಗಳು ನಿರ್ಣಯಿಸಲಿವೆ.

ವೆಬ್ದುನಿಯಾವನ್ನು ಓದಿ