ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ಪಡೆದ ಸೋನಿಯಾ ಅಳಿಯ

ಮಂಗಳವಾರ, 23 ಏಪ್ರಿಲ್ 2013 (13:01 IST)
PR
PR
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಮತ್ತು ಡಿಎಲ್‌ಎಫ್ ನಡುವಣ ಭೂ ವ್ಯವಹಾರದ ತನಿಖೆ ನಡೆಸಿರುವ ಹರಿಯಾಣ ಸರಕಾರ ಈ ವ್ಯವಹಾರದಲ್ಲಿ ಭಾರೀ ಪ್ರಮಾಣದ ಅಕ್ರಮಗಳಾಗಿವೆ ಎಂದಿರುವ ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ ಅವರ ಆರೋಪವನ್ನು ತಿರಸ್ಕರಿಸಿ ಭೂಮಿಯ ಬೆಲೆಯನ್ನು ಅಪಮೌಲ್ಯಗೊಳಿಸಿಲ್ಲ ಎನ್ನುವ ಮೂಲಕ ವಾದ್ರಾಗೆ ಅಕ್ಷರಶಃ ಕ್ಲೀನ್‌ಚಿಟ್‌ ನೀಡಿದೆ.

ವಾದ್ರಾ ಮತ್ತು ಡಿಎಲ್‌ಎಫ್ ನಡುವಣ ಮೂರು ಎಕರೆ ಭೂ ಮಾರಾಟದ ವಹಿವಾಟನ್ನು ರದ್ದುಪಡಿಸುವ ಮೂಲಕ ಖೇಮ್ಕಾ ತನ್ನ ಅಧಿಕಾರ ವ್ಯಾಪ್ತಿ ಮೀರಿದ ಕ್ರಮ ಕೈಗೊಂಡಿದ್ದಾರೆಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೃಷ್ಣ ಮೋಹನ್‌ ನೇತೃತ್ವದ ತನಿಖಾ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ತನಿಖೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಮೋಹನ್‌ ತಾನು ವರದಿಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿರುವುದರಿಂದ ಮುಂದಿನ ಕ್ರಮ ಕೈಗೊಳ್ಳಬೇಕಾದವರು ಅವರು ಎಂದಿದ್ದಾರೆ. ಸಮಿತಿಯ ಇನ್ನೋರ್ವ ಸದಸ್ಯ ಪ್ರಧಾನ ಕಾರ್ಯದರ್ಶಿ ರಾಜನ್‌ ಗುಪ್ತ ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಹರ್ಯಾಣದ ಶಿಕೊಪುರ ಎನ್ನುವ ಹಳ್ಳಿಯಲ್ಲಿ ವಾದ್ರಾ ಕಂಪೆನಿ ಮತ್ತು ಡಿಎಲ್‌ಎಫ್ ನಡುವೆ ನಡೆದಿರುವ ಭೂ ವ್ಯವಹಾರಗಳನ್ನು ಪರಿಶೀಲಿಸಲು ಸರಕಾರ ತನಿಖಾ ಸಮಿತಿಯನ್ನು ನೇಮಿಸಿತ್ತು. ಈ ವ್ಯವಹಾರದಲ್ಲಿ ಅನೇಕ ಅಕ್ರಮಗಳಾಗಿವೆ ಎಂದು ಹೇಳಿ ಖೇಮ್ಕಾ ಎಲ್ಲ ಭೂ ಪರಿವರ್ತನೆಗಳನ್ನು ರದ್ದುಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ