ನರೇಂದ್ರ ಮೋದಿ, ರಾಜನಾಥ್ ಸಿಂಗ್‌ಗೆ ತಾಕತ್ರಿದ್ರೆ ಅಮೇಥಿಯಿಂದ ಸ್ಪರ್ಧಿಸಲಿ: ಆಮ್ ಆದ್ಮಿ

ಸೋಮವಾರ, 30 ಡಿಸೆಂಬರ್ 2013 (14:15 IST)
PTI
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ತಾಕತ್ತಿದ್ರೆ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯಲ್ಲಿ ಸ್ಪರ್ಧಿಸಲಿ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಸವಾಲ್ ಹಾಕಿದ್ದಾರೆ.

ರಾಜನಾಥ್ ಸಿಂಗ್ ಮತ್ತು ನರೇಂದ್ರ ಮೋದಿ ತಮ್ಮನ್ನು ತಾವು ಪ್ರಭಾವಿ ನಾಯಕರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇಂತಹ ನಾಯಕರು ಅಮೇಥಿಯಿಂದ ಸ್ಪರ್ಧಿಸಲೇ ಬೇಕು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಮೊದಲ ಚುನಾವಣೆಯಲ್ಲಿಯೇ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ ಸಾವಿರಾರು ಮತಗಳ ಅಂತರದಿಂದ ಜಯಗಳಿಸಿರುವುದನ್ನು ಬಿಜೆಪಿ ಮುಖಂಡರು ಅರಿಯಲಿ ಎಂದು ತಿರುಗೇಟು ನೀಡಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎದುರು ಆಪ್ ಪಕ್ಷದ ಕುಮಾರ್ ವಿಶ್ವಾಸ್ ಸ್ಪರ್ಧಿಸಲಿದ್ದಾರೆ ಎನ್ನುವ ಉಹಾಪೋಹಗಳು ಹರಡಿವೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಪ್ರಾಮಾಣಿಕರಿರಬಹುದು. ಆದರೆ, ಅವರ ಸಂಪುಟದಲ್ಲಿರುವ ಸಚಿವರು ಭ್ರಷ್ಟರಾಗಿದ್ದಾರೆ ಎಂದು ಆಪ್ ಮುಖಂಡ ಕುಮಾರ್ ವಿಶ್ವಾಸ್ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ