ಲೋಕಸಭೆಯಲ್ಲಿ ವಿರೋಧ ಪಕ್ಷ ಇಲ್ಲವಾಗತ್ತಾ?

ಶನಿವಾರ, 17 ಮೇ 2014 (12:34 IST)
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಥಮ ಬಾರಿಗೆ ವ್ಯಕ್ತಿ ಕೇಂದ್ರಿತ ಎನಿಸಿದ ಈ ಬಾರಿಯ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಪರಿಸ್ಥಿತಿಯನ್ನು ತಂದೊಡ್ಡಿದೆ. ಒಂದು ವೇಳೆ ಕಾಂಗ್ರೆಸ್ ಮೈತ್ರಿಕೂಟದಲ್ಲಿ ಯಾರಾದರೂ ಐದು ಜನ ಕೈಕೊಟ್ಟರೆ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಿಂದ ಕೂಡ ಹಿಂದೆ ಸರಿಯ ಬೇಕಾಗುತ್ತದೆ. ಆಗ ದೇಶದಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗುತ್ತದೆ.  
 
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ನಿಚ್ಚಳ ಬಹುಮತ ಲಭಿಸಿದ್ದು, 543 ಲೋಕಸಭಾ ಸ್ಥಾನಗಳಲ್ಲಿ 285 ಸ್ಥಾನ ಗೆದ್ದಿರುವ ಬಿಜೆಪಿ ನಿರಾಯಾಸವಾಗಿ ಗದ್ದಿಗೆಯನ್ನು ಏರುತ್ತಿದೆ. ಎನ್‌ಡಿಎ ಮೈತ್ರಿಕೂಟಗಳು ಗೆದ್ದಿರುವ ಸ್ಥಾನ 337. ಬರೊಬ್ಬರಿ 60 ವರ್ಷ ಮತ್ತು 2004 ರಿಂದ ಸತತ 10 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಹಿಂದೆದೂ ಕಾಣದಂತಹ ಅವಮಾನಕರ ಸೋಲನ್ನು ಕಂಡಿದ್ದು  ಯುಪಿಎ ಮೈತ್ರಿಕೂಟ ಗೆದ್ದಿದ್ದು ಕೇವಲ 58 ಸ್ಥಾನಗಳನ್ನು. ಅದರಲ್ಲಿ ಕಾಂಗ್ರೆಸ್ ಪಾಲು ಕೇವಲ 43 ಮಾತ್ರ. ಹಾಗಾಗಿ ಯುಪಿಎ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. 
 
ದೇಶದಲ್ಲಿ ಒಟ್ಟು 543 ಲೋಕಸಭಾ ಸ್ಥಾನಗಳಿದ್ದು, ವಿರೋಧ ಪಕ್ಷ ಸ್ಥಾನ ಪಡೆಯಲು ಪ್ರತಿಶತ 10 ಅಂದರೆ 54ರಷ್ಟು ಬಲಾಬಲ ಇರಬೇಕು. ಅಂದರೆ ಮಾತ್ರ ವಿರೋಧ ಪಕ್ಷದ ನಾಯಕನ ಸ್ಥಾನ ಗಳಿಸಬಹುದು. ಕಾಂಗ್ರೆಸ್ ಗೆದ್ದಿರುವುದು ಕೇವಲ 43 ಸ್ಥಾನಗಳನ್ನು. ಹಾಗಾಗಿ ತಮ್ಮ ಮಿತ್ರರಲ್ಲಿ ಯಾರಾದರೂ 5 ಜನ ಕೈಕೊಟ್ಟರೆ 58 ಸಂಖ್ಯಾಬಲಗಳನ್ನು ಹೊಂದಿರುವ ಯುಪಿಎ ಸಂಕಷ್ಟಕ್ಕೆ ಸಿಲುಕಬಹುದು ಮತ್ತು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಿಂದ ಕೂಡ ದೂರವಿರಬೇಕಾಗುತ್ತದೆ. ಇದು ಕಾಂಗ್ರೆಸ್ ಪಾಲಿಗೆ ಅಳಿದುಳಿದ ಮರ್ಯಾದೆಯನ್ನು ಇಲ್ಲವಾಗಿಸುವ ಪರಿಸ್ಥಿತಿ ನಿರ್ಮಿಸಬಹುದು. ಅಲ್ಲದೆ ಸರಕಾರಕ್ಕೆ ಪ್ರಶ್ನಿಸಲು ವಿರೋಧ ಪಕ್ಷವೇ ಇಲ್ಲವಾಗಿಸಬಹುದು. 

ವೆಬ್ದುನಿಯಾವನ್ನು ಓದಿ