2012-13: ಮುಖರ್ಜಿ ಈ ಬಾರಿ ಜನಪರ ಬಜೆಟ್ ಮಂಡಿಸ್ತಾರಾ?

ಶುಕ್ರವಾರ, 16 ಮಾರ್ಚ್ 2012 (08:37 IST)
PTI
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಿರುವ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಕನಿಷ್ಠ 2 ಲಕ್ಷ ರೂಪಾಯಿಗೆ ಹೆಚ್ಚಿಸುವ ನಿರೀಕ್ಷೆ ಇದ್ದು, ತೆರಿಗೆದಾರರು ಅವರಿಂದ ಮತ್ತಷ್ಟು ವಿನಾಯ್ತಿಗಳನ್ನು ಎದುರು ನೋಡುತ್ತಿದ್ದಾರೆ.

3 ಸ್ತರಗಳಲ್ಲಿ ತೆರಿಗೆಯ ಗರಿಷ್ಠ ಮಿತಿ ಪ್ರಮಾಣವನ್ನು ಸಚಿವರು ಹೆಚ್ಚಿಸುವ ನಿರೀಕ್ಷೆ ಇದ್ದು, ನೇರ ತೆರಿಗೆ ಸಂಹಿತೆ (ಡಿಟಿಸಿ) ವಿಧೇಯಕದಲ್ಲೂ ಇದರ ಪ್ರಸ್ತಾಪವಾಗಿದೆ. 2013-14ನೇ ಸಾಲಿನಿಂದ ಡಿಟಿಸಿ ಜಾರಿಯಾಗಲಿದ್ದು, ಬಜೆಟ್ ಭಾಷಣದಲ್ಲಿ ಸಚಿವರು ಇದನ್ನು ಅಧಿಕೃತವಾಗಿ ಘೋಷಿಸಬಹುದು.

ಡಿಟಿಸಿ ವಿಧೇಯಕವನ್ನು ಪರಿಶೀಲಿಸಿರುವ ಸಂಸತ್ತಿನ ಸ್ಥಾಯಿ ಸಮಿತಿ, ತನ್ನ ವರದಿಯನ್ನು ಈಗಾಗಲೇ ಲೋಕಸಭೆ ಸ್ಪೀಕರ್‌ಗೆ ಸಲ್ಲಿಸಿದೆ. ಆದಾಯ ತೆರಿಗೆ ಮಿತಿಯನ್ನು 3ಲಕ್ಷ ರೂ.ಗೆ ಏರಿಸುವಂತೆ ಸಮಿತಿ ಶಿಫಾರಸು ಮಾಡಿದ್ದರೂ, ಆರ್ಥಿಕ ಸಂಪನ್ಮೂಲ ಕೊರತೆ ಹಿನ್ನೆಲೆಯಲ್ಲಿ ಮುಖರ್ಜಿ ಇದನ್ನು ಒಪ್ಪುವ ಸಾಧ್ಯತೆ ತೀರ ಕಡಿಮೆ ಎಂದು ವಿಶ್ಲೀಷಿಸಲಾಗುತ್ತಿದೆ.

ಜನಪರ ಬಜೆಟ್ ನಿರೀಕ್ಷಿಸಬಹುದೇ?
2012-13ನೇ ಸಾಲಿನಲ್ಲಿ ಪ್ರಣಬ್ ಮುಖರ್ಜಿ ಜನಪರ ಬಜೆಟ್ ಮಂಡಿಸುತ್ತಾರೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಏತನ್ಮಧ್ಯೆ ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿರುವ ಯುಪಿಎ ಈ ಬಾರಿ ಬಜೆಟ್‌ನಲ್ಲಿ ಗಿಮಿಕ್ ಮಾಡುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್, ಡಿಸೇಲ್, ಸೀಮೆಎಣ್ಣೆ, ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರಿಗೆ ಸಾಕಷ್ಟು ಹೊರೆಯಾಗಿದೆ. ಹಾಗಾಗಿ ಈ ಬಾರಿ 2012-13ರ ಬಜೆಟ್‌ ಜನಪರ ಬಜೆಟ್ ಆಗಲಿದೆಯಾ ಎಂಬುದಕ್ಕೆ ಮುಖರ್ಜಿ ಮಂಡಿಸಲಿರುವ ಬಜೆಟ್ ಉತ್ತರ ನೀಡಲಿದೆ.

ವೆಬ್ದುನಿಯಾವನ್ನು ಓದಿ