ಕಾರ್ಮಿಕ ದಂಗೆ; ಮಾರುತಿ ಸುಜುಕಿ ಹೆಚ್‌ಆರ್ ಸುಟ್ಟ ದೇಹ ಪತ್ತೆ

ಗುರುವಾರ, 19 ಜುಲೈ 2012 (17:00 IST)
PR
ದೇಶದ ಬೃಹತ್ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿಯ ಮಾನೇಸರ್‌ನಲ್ಲಿರುವ ಘಟಕದಲ್ಲಿ ಬುಧವಾರ ಸಂಜೆ ವೇಳೆಗೆ ಆಡಳಿತ ವರ್ಗ ಮತ್ತು ನೌಕರರ ನಡುವಿನ ಭಿನ್ನಮತ ಹಿಂಸಾತ್ಮಕ ರೂಪ ತಳೆದಿದ್ದು, ಕಾರ್ಖಾನೆಯಲ್ಲಿ ಗುರುವಾರ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಂಪನಿಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಅವ್ನಿಶ್ ಕುಮಾರ್ ದೇವ್ ಎಂದು ಗುರುತಿಸಲಾಗಿದೆ.

ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವೆ ಹಲವಾರು ವರ್ಷಗಳಿಂದ ಭಿನ್ನಮತ ತಲೆದೋರುತ್ತಲೇ ಇದ್ದು ಬುಧವಾರ ಸಂಜೆ ವೇಳೆ ಪೂರ್ವ ಸಂಚಿನ ಯೋಜನೆಯಂತೆ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವೆ ಹೊಡೆದಾಟ ಆರಂಭವಾಯಿತು.

ಆಡಳಿತ ವರ್ಗಗಳ ದರ್ಪದ ವರ್ತನೆಯಿಂದ ರೋಸಿ ಹೋದ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಾತುಕತೆ ವಿಕೋಪಕ್ಕೆ ತೆರಳಿ ಹಿಂಸೆ ಆರಂಭವಾಗಿದೆ. ಸ್ಪಲ್ಪ ಸಮಯದಲ್ಲೇ ಕಾರ್ಖಾನೆಯ ಕಚೇರಿಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅಸಮಾಧಾನಗೊಂಡ ನೌಕರರು ಸಂಚು ರೂಪಿಸಿ ಹಿರಿಯ ಅಧಿಕಾರಿಯನ್ನು ಸುಟ್ಟು ಹಾಕಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಗಲಭೆಯಿಂದಾಗಿ ಸುಮಾರು 85 ಮಂದಿಗೆ ಗಾಯಗಳಾಗಿವೆ ಅವರಲ್ಲಿ ಇಬ್ಬರು ಜಪಾನ್ ಮೂಲದವರೂ ಸೇರಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು, 99 ಮಂದಿಯನ್ನು ಬಂದಿಸಿದ್ದು, ಅವರ ವಿರುದ್ದ ಕೊಲೆ, ಕೊಲೆ ಯತ್ನ, ಗಲಭೆ ಸೃಷ್ಟಿಸಿರುವ ಆರೋಪ, ಗಂಭೀರ ಗಾಯ ಮಾಡಿರುವ ಆರೋಪ ಹೊರಿಸಲಾಗಿದೆ. ಪ್ರಕರಣದ ಸಾಕ್ಷಿಯಾಗಿ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಈ ಸಂಬಂಧ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಮುಖಾಂತರ ಕೋರಿಕೆ ಸಲ್ಲಿಸುವ ಹೊರತಾಗಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ