ಅಧಿಕಾರಿ ಕೊಲೆ; ತನಿಖೆ ಮುಗಿಯುವ ವರೆಗೂ ಮಾರುತಿ ಬಂದ್

ಭಾನುವಾರ, 22 ಜುಲೈ 2012 (09:40 IST)
PTI
ದೇಶದ ಬೃಹತ್ ಕಾರುತಯಾರಕ ಮಾರುತಿ ಸುಜುಕಿ ಕಂಪನಿಯ ಮನೇಸರ್ ಘಟಕದಲ್ಲಿ ಬುಧವಾರ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವೆ ನಡೆದ ಚಕಮಕಿಯಲ್ಲಿ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಮೃತಪಟ್ಟಿರುವುದರಿಂದಾಗಿ, ಸ್ಥಳೀಯ ಕಾನೂನು ಪ್ರಾಧಿಕಾರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಪೊಲೀಸ್ ತನಿಖೆ ಮುಕ್ತಾಯವಾಗುವ ವರೆಗೂ ಮಾನೆಸರ್ ಘಟಕವನ್ನು ಸ್ಥಗಿತಗೊಳಿಸುವುದಾಗಿ ಮಾರುತಿ ಸುಜುಕಿ ಪ್ರಕಟಿಸಿದೆ.

ಮಾನವ ಸಂಪನ್ಮೂಲ ಅಧಿಕಾರಿ ಹಾಗೂ ಪ್ರಧಾನ ವ್ಯವಸ್ಥಾಪಕ ಅವನಿಶ್ ಕುಮಾರ್ ದೇವ್ ಅವರನ್ನು ತಮ್ಮ ಕಚೇರಿಯೊಳಗೆ ಕೂಡಿ ಹಾಕಿ ಸುಟ್ಟುಹಾಕಿರುವ ಪ್ರಕರಣ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್.ಸಿ. ಭಾರ್ಗವ, ಕಾರು ಉತ್ಪಾಧಿಸಿ ಹಣ ಮಾಡುವ ಕಾಯಕಕ್ಕಿಂತ ತಮ್ಮ ನೌಕರರು, ಕಾರ್ಮಿಕರ ಸುರಕ್ಷತೆ ಮುಖ್ಯ ಎಂದಿದ್ದಾರೆ.

ಮತ್ತೆ ಮಾತು ಆರಂಭಿಸಿದ ಅವರು, ನಮ್ಮ ಕಂಪನಿ ಸ್ಥಗಿತವಾಗಿರುವ ಸಂದರ್ಭದಲ್ಲಿ ನಡೆಯುವ ಯಾವುದೇ ಗಲಭೆಗಳಿಗೆ ನಾವು ಜವಾಬ್ದಾರರಲ್ಲ ಎಂಬ ಹಾರಿಕೆಯ ಹೇಳಿಕೆ ನೀಡಿದ್ದಾರೆ. ಮಾರುತಿ ಸುಜುಕಿ ಮನೇಸರ್ ಘಟಕದಲ್ಲಿ ಈ ಹಿಂದಿನಿಂದಲೂ ಅಸಮಾಧಾನ ತಲೆದೋರುತ್ತಿದ್ದು, ಕಾರ್ಮಿಕ ಕಾನೂನು ಪದೇ ಪದೇ ಉಲ್ಲಂಘನೆಯಾಗುತ್ತಿದ್ದರೂ, ಈ ಸಂಬಂಧ ಸರ್ಕಾರವಾಗಲೀ, ಆಡಳಿತ ಮಂಡಳಿಯಾಗಲೀ ಎಚ್ಚೆತ್ತುಕೊಂಡಿರಲಿಲ್ಲ.

ಆನಂತರ ನೌಕರರು ಹಿಂಸಾಚಾರಕ್ಕಿಳಿದ ಕೂಡಲೇ ಎಸ್ಕೇಪ್ ಆಗುತ್ತಿರುವ ಆಡಳಿತ ಮಂಡಳಿ, ಹಿಂಸಾಚಾರಕ್ಕೆ ಪ್ರೇರೇಪಿಸಿದ ಅಂಶಗಳ ನಿವಾರಣೆಗೆ ಈ ಮೊದಲೇ ಮುಂದಾಗಿದ್ದಿದ್ದರೆ ಕಂಪನಿಯ ಪ್ರಧಾನ ವ್ಯವಸ್ಥಾಪಕ ಹಾಗೂ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಅವನಿಶ್ ಕುಮಾರ್ ದೇವ್ ಅವರ ಸಾವನ್ನು ತಪ್ಪಿಸಬಹುದಿತ್ತು.

ಇದೀಗ ಎಲ್ಲಕ್ಕೂ ನಾವು ಕಾರಣರಲ್ಲ ಎಂಬ ಹಾರಿಕೆಯ ಉತ್ತರ ನೀಡುವ ಮೂಲಕ ಜವಾಬ್ದಾರಿಯುತ ಸ್ಥಾನದಿಂದ ನುಣುಚಲು ಪ್ರಯತ್ನಿಸುತ್ತಿದೆ. ಕೊಲೆಗೆ ಕಾರಣ ಕರ್ತರಾದ ಪಾಪಿ ಕಾರ್ಮಿಕರನ್ನು ಬಂಧಿಸಲಾಗುತ್ತಿದ್ದು ಹಲವರನ್ನು ಈಗಾಗಲೇ ತನಿಖೆಗೊಳಪಡಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ