ಉ. ಪ್ರದೇಶದಲ್ಲಿ ಅಜಮ್ ಖಾನ್ ಮತ್ತು ಅಮಿತ್ ಶಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿಷೇಧ

ಶನಿವಾರ, 12 ಏಪ್ರಿಲ್ 2014 (14:51 IST)
ಚುನಾವಣಾ ಆಯೋಗ ಶುಕ್ರವಾರ ನರೇಂದ್ರ ಮೋದಿ ಅವರ ಆಪ್ತ ಸಹಾಯಕ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ವಿವಾದಾತ್ಮಕ ಸಮಾಜವಾದಿ ನಾಯಕ ಅಜಮ್ ಖಾನ್‌ ಚುನಾವಣಾ ಪ್ರಚಾರ ನಡೆಸುವುದನ್ನು ನಿಷೇಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
PTI

ಇನ್ನು ಇವರಿಬ್ಬರು ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸಭೆ, ಸಮಾವೇಶ ಅಥವಾ ರಸ್ತೆ ಪ್ರದರ್ಶನಗಳನ್ನು ನಡೆಸುವ ಹಾಗಿಲ್ಲ.

ಅಲ್ಲದೇ ಅವರಿಬ್ಬರ ವಿರುದ್ಧ ಕ್ರಿಮಿನಲ್ ವ್ಯಾಜ್ಯವನ್ನು ಪ್ರಾರಂಭಿಸುವಂತೆ ಆಯೋಗ ಅಧಿಕಾರಿಗಳಿಗೆ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ವಿ ಸಂಪತ್ ಮತ್ತು ಇತರ ಚುನಾವಣಾ ಆಯುಕ್ತರಾದ ಎಚ್ಎಸ್ ಬ್ರಹ್ಮ, ಎಸ್‌ಎನ್‌ಎ ಜೈದಿ ಭಾಗವಹಿಸಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು.

ಕಾನೂನು-ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿಯಲ್ಲಿ ಯಾವುದೇ ಪರಿಣಾಮ ಉಂಟಾಗದಂತೆ ತಡೆಯುವ ಸಲುವಾಗಿ ಖಾನ್ ಮತ್ತು ಶಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಆಯೋಗ ನಿರ್ದೇಶನ ನೀಡಿದೆ.

ಈ ಎರಡೂ ರಾಜಕಾರಣಿಗಳು ಉತ್ತರಪ್ರದೇಶದಲ್ಲಿ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿವಾದಾತ್ಮಕ ಟೀಕೆಗಳನ್ನು ಮಾಡಿದ್ದರು. ಅಮಿತ್ ಶಾ ಮತ್ತು ಅಜಮ್ ಖಾನ್ ವಿರುದ್ಧ 3 ಪುಟಗಳಷ್ಟು ದೀರ್ಘವಾದ ಆದೇಶವನ್ನು ಆಯೋಗ ಜಾರಿ ಮಾಡಿದೆ.

ವೆಬ್ದುನಿಯಾವನ್ನು ಓದಿ