ನಮ್ಮ ಕರ್ನಾಟಕದಲ್ಲಿ ಒಂದು ದುರಂತ ಸಂಭವಿಸುತ್ತಿದೆ. ಶಾಲೆಗಳ ಫಾಶಿ ಶಿಕ್ಷೆಗೆ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳ ಸಂಖ್ಯೆ 5ಕ್ಕಿಂತ ಕಡಿಮೆ ಇರುವ 595 ಶಾಲೆಗಳು ಈಗಲೇ ಖತಂ. 6ರಿಂದ 10 ವಿದ್ಯಾರ್ಥಿಗಳಿರುವ 1500 ಶಾಲೆಗಳು ಮುಂದಿನ ವರ್ಷಾರಂಭಕ್ಕೆ ಕೊರಳೊಡ್ಡಿ ನಿಲ್ಲಬೇಕು. ಅವುಗಳಿಗೆ ಈಗಿಂದಲೇ ಮರಣ ಭೀತಿ. ಕ್ಷಣೇ ಕ್ಷಣೇ ದುರ್ಬಲಗೊಳ್ಳುತ್ತಾ ದಿನದೂಡಬಹುದು. ಸಾವಿನ ಸಮೀಪದ ಅನುಭವವೇ ಸಿಗದ ಕೋಮಾ ಸ್ಥಿತಿಗೆ ತಲುಪಿದ ರೋಗಿಯಂತಾಗಬಹುದು.
ನಮ್ಮ ಶಿಕ್ಷಣ ಮಂತ್ರಿಗಳನ್ನು ಒಂದು ವಿಚಾರಕ್ಕಾಗಿ ಅಭಿನಂದಿಸಬೇಕು. ಸದ್ಯ ಶಾಲೆಗಳನ್ನು ಮುಚ್ಚುವುದರ ಮೂಲಕ ಅವರು ಮೆಕಾಲೆ ಮಾದರಿಯ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತಾರೆ. ಆದರೆ ದುರಂತವೆಂದರೆ ಶಿಕ್ಷಣ ಇಲಾಖೆಯು ಮೆಕಾಲೆ ಹೇಳಿದ್ದಕ್ಕಿಂತಲೂ ಕಳಪೆಯ ಅನುದಾನ ರಹಿತ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೂ ಅನುಮತಿ ನೀಡಿದ್ದು, ಅವುಗಳ ಅಸ್ತಿತ್ವ ರಕ್ಷಣೆಗಾಗಿ ಈ ಕೆಲಸ ಮಾಡುತ್ತಿದ್ದಾರೆಂಬುದನ್ನು ಗುಟ್ಟು ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಭ್ರಷ್ಟರು ಈ ಹಿಂದೆ ಮಾಡಿದ ಅಪರಾಧಕ್ಕೆ ಸನ್ಮಾನ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಲೆಕೊಡುವುದು ಯಾಕೆಂದೇ ನನಗೆ ಅರ್ಥವಾಗುವುದಿಲ್ಲ.
ಮಂಗಳೂರಿನಲ್ಲಿ ಈ ವರ್ಷ ಆಗಸ್ಟ್ 27ರಂದು ನಡೆದ ಶೈಕ್ಷಣಿಕ ಸಮಾವೇಶದಲ್ಲಿ ನಾನು ಈ ಬಗ್ಗೆ ಅವರ ಗಮನ ಸೆಳೆದಿದ್ದೇನೆ. ಮೊದಲು ಸರಕಾರಿ ಶಾಲೆಗಳಿಗೆ ಯಾಕೆ ಮಕ್ಕಳು ಕಡಿಮೆ ಅಂತ ಅಧ್ಯಯನ ಮಾಡಿ. ವಸ್ತು ಸ್ಥಿತಿ ಏನೆಂದರೆ ಅನುದಾನ ರಹಿತ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಅಸ್ತಿತ್ವದ ಪ್ರಶ್ನೆ ಇದೆ. ಅವರು ಕಲಿಕೆಗಿಂತ ಹೆಚ್ಚಾಗಿ ಬಾಹ್ಯಾಡಂಬರಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಜನರನ್ನು ಇವುಗಳಿಂದ ಆಕರ್ಷಿಸುತ್ತಾರೆ. ಮನೆತನಕ ವಾಹನ ಕಳಿಸುತ್ತಾರೆ. ಹಳ್ಳಿ ಹಳ್ಳಿಗಳಿಗೆ ವಾಹನಗಳು ಹೋಗುತ್ತವೆ. ಸರಕಾರೀ ಶಾಲೆಗಳ ಎದುರಿಂದಲೇ ಮಕ್ಕಳನ್ನು ತಮ್ಮ ಶಾಲೆಗಳಿಗೆ ಸೆಳೆಯುತ್ತಾರೆ. ಹಳ್ಳಿಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆಯೆಂದು ಒಂದೇ ಕಾರಣ ನೀಡಿ ನಿಮ್ಮನ್ನು ನೀವು ಏಕೆ ಸಮರ್ಥಿಸಿಕೊಳ್ಳುತ್ತೀರಿ? ಯಾರೋ ಅಧಿಕಾರಿಗಳು ಯಾವುದೋ ಕಾಲದಲ್ಲಿ ಇಂತಹ ಶಾಲೆಗಳಿಗೆ ಅನುಮತಿ ನೀಡಿ ತಮ್ಮ ಗಳಿಕೆ ಮಾಡಿಕೊಂಡು ಹೋಗಿದ್ದಾರೆ. ಈಗ ನಿಮ್ಮ ಕೈಯಲ್ಲಿ ಅಧಿಕಾರವಿದೆ. ದೇಶದ ಒಳಿತಿನ ದೃಷ್ಟಿಯಿಂದ, ಬಡ ಜನರ ಅಭಿವೃದ್ಧಿಯ ದೃಷ್ಟಿಯಿಂದ ಇಡೀ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸುವಂತಹ ಕೆಲಸ ಮಾಡಿ. ಮೆಕಾಲೆ ಮಾದರಿಯನ್ನು ವಿರೋಧಿಸುತ್ತಿದ್ದ ನೀವು ಈಗ ಶಿಕ್ಷಣಕ್ಕೆ ಹೊಸ ಆಯಾಮ ನೀಡುವ ಕೆಲಸ ಮಾಡಿ ಎಂಬುದು ನನ್ನ ವಿನಂತಿಯಾಗಿತ್ತು.
ಪರಿಸ್ಥಿತಿಯ ಅಧ್ಯಯನಕ್ಕೆ ಅವಕಾಶ ನೀಡಿದರೆ ಸಹಕರಿಸುವುದಾಗಿಯೂ ಹೇಳಿದ್ದೆ. ಆದರೆ ಅವರು ವಸ್ತುಸ್ಥಿತಿಯ ಅಧ್ಯಯನಕ್ಕೆ ಸಿದ್ಧರಿಲ್ಲ. ಬದಲಾಗಿ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗಿ ಜನಸಂಖ್ಯೆ ಕಡಿಮೆಯಾಗಿ ಹೀಗಾಗಿದೆ ಎಂಬ ಸಬೂಬು ಹೇಳುವುದನ್ನು ಪತ್ರಿಕೆಗಳಲ್ಲಿ ಓದಿದಾಗ ನಿಜಕ್ಕೂ ಈ ಮಂತ್ರಿಗಳಿಗೆ ಬದ್ಧತೆ ಇಲ್ಲದಿರುವ ಬಗ್ಗೆ ಸಂಕಟವಾಗುತ್ತದೆ.
ಶಿಕ್ಷಣವೆಂಬುದು ಇಬ್ಬರು ತಾಯಿಯಂದಿರ ಕೂಸು. ಅದರಲ್ಲಿ ಮನಬಂದಂತೆ ಕೈಯಾಡಿಸಲು ಕೇಂದ್ರ ಸರಕಾರಕ್ಕೂ ರಾಜ್ಯ ಸರಕಾರಕ್ಕೂ ಸಾಧ್ಯತೆಗಳಿವೆ. ಅದನ್ನು ಸಾಕುವ ವಿಷಯ ಬಂದಾಗ ಮಾತ್ರ ಅದು ನಿನ್ನದು ಅದು ನಿನ್ನದು ಎಂಬ ಧೋರಣೆ ಸರಕಾರಗಳದ್ದಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ 20ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಲು ಕೇಂದ್ರ ಹೇಳಿದ್ದರೂ ತಾನು ಕೇವಲ 105ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ಸಂಖ್ಯೆ ಇರುವ ಶಾಲೆಗಳನ್ನು ಮಾತ್ರ ಮುಚ್ಚುವುದಾಗಿ ನಮ್ಮ ಶಿಕ್ಷಣ ಮಂತ್ರಿಗಳು ತಮ್ಮ ಉದಾರತೆಯನ್ನು ತೋರಿದ್ದಾರೆ.
ಆದರೆ ಪರಿಣಾಮದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುವ ಈ ಉಪಕ್ರಮ ಸರಿಯೇ? ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸಮಾನವಾಗಿ ಉತ್ತಮ ಗುಣಮಟ್ಟವೇ ಇದೆಯೆಂದು ಇವರು ನಂಬುವುದಾದರೂ ಯಾಕೆ? ತಮ್ಮ ಸರಕಾರಿ ಶಾಲೆಗಳಿಗೆ ಮೆರಿಟ್‍ನಲ್ಲಿ ಅತಿ ಹೆಚ್ಚಿನ ಸ್ಥಾನವುಳ್ಳವರನ್ನೇ ಶಿಕ್ಷಕರಾಗಿ ನೇಮಿಸಿಕೊಂಡ ಬಳಿಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸರಕಾರಿ ಶಾಲೆಗಳಿಗೇಕೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ಮಾಡಬಾರದು? ಜನರ ಬಾಯಲ್ಲಿ ಈಗ ವ್ಯಾಪಕವಾಗಿರುವ ಮಾತೆಂದರೆ, ಸರಕಾರಿ ಶಾಲೆಗಳಲ್ಲಿ ಶಿಕ್ಷಣವೊಂದನ್ನು ಬಿಟ್ಟು ಎಲ್ಲವೂ ಇದೆ. ಇಂತಹ ಹಗುರ ಮಾತುಗಳನ್ನೇಕೆ ಕೊನೆಗೊಳಿಸಬಾರದು? ಇದನ್ನು ಮಾಡಲು ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಹಾಗಾದಾಗ ಸಮಾಜದಲ್ಲಿ ಅತ್ಯಂತ ಬಡವನಿಗೂ ತನ್ನ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಇದು ಸಾಮಾಜಿಕ ನ್ಯಾಯವನ್ನು ಬಲಪಡಿಸುವುದಷ್ಟೇ ಅಲ್ಲ, ಶಾಲೆಗಳ ಕತ್ತು ಹಿಚುಕುವ ಐತಿಹಾಸಿಕ ಹೇಯ ಕೃತ್ಯದಿಂದ ಸರಕಾರವನ್ನು ಪಾರು ಮಾಡುತ್ತದೆ.
- ಡಾ. ಚಂದ್ರಶೇಖರ ದಾಮ್ಲೆ
WD
[ಲೇಖಕರ ಪರಿಚಯ: ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದು ಕರ್ನಾಟಕ ಸರಕಾರದಿಂದ ರಾಜ್ಯಮಟ್ಟದ ಅತ್ಯುತ್ತಮ ಕಾಲೇಜು ಶಿಕ್ಷಕ ಪ್ರಶಸ್ತಿ ಭಾಜನರು. ಗ್ರಾಮೀಣ ಶಿಕ್ಷಣಕ್ಕಾಗಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಲೇಖಕ- ಕತೆಗಾರರಾಗಿದ್ದು ಶೈಕ್ಷಣಿಕ, ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತರು. ಪರಿಸರ ಸಂರಕ್ಷಣೆ ಮತ್ತು ಯಕ್ಷಗಾನ ಇವರ ಹವ್ಯಾಸಗಳು. ಸುಳ್ಯ ತಾಲೂಕು 13ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಇವರಿಗೆ ಸಂದಿದೆ.]