ಅಮೆರಿಕಕ್ಕೆ ವಿವರಣೆ ನೀಡಿ ಹಕ್ಕಾನಿ ಪಾಕ್‌ಗೆ ವಾಪಸ್

ಶನಿವಾರ, 19 ನವೆಂಬರ್ 2011 (16:13 IST)
ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರು ಅಮೆರಿಕ ಜಂಟಿ ಸೇನಾ ಪಡೆಯ ಅಂದಿನ ಮುಖ್ಯಸ್ಥರಾಗಿದ್ದ ಅಡ್ಮಿರಲ್‌ ಮೈಕ್‌ ಮುಲ್ಲೆನ್ ಅವರಿಗೆ ಬರೆದ ರಹಸ್ಯ ಪತ್ರದಿಂದ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ವಿವರಣೆ ನೀಡಲು ಅಮೆರಿಕದಲ್ಲಿರುವ ಪಾಕ್‌ ರಾಯಭಾರಿ ಹುಸೇನ್‌ ಹಕ್ಕಾನಿ ಅವರು ಸ್ವದೇಶಕ್ಕೆ ವಾಪಸಾಗಿದ್ದಾರೆ.

ಅಲ್‌ ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ನನ್ನು ಅಮೆರಿಕದ ಕಮಾಂಡೋ ಪಡೆಗಳು ಹತ್ಯೆ ಮಾಡಿದ ನಂತರ ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರು ದೇಶದಲ್ಲಿ ಸಂಭವಿಸಬಹುದಾಗಿದ್ದ ಸೇನಾ ಕ್ರಾಂತಿಯನ್ನು ತಡೆಗಟ್ಟುವ ಉದ್ದೇಶದಿಂದ ಅಮೆರಿಕದ ನೆರವು ಕೋರಿ ರಹಸ್ಯ ಪತ್ರ ಬರೆದಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜರ್ದಾರಿ ಅವರು ಅಮೆರಿಕ ಜಂಟಿ ಸೇನಾ ಪಡೆಯ ಅಂದಿನ ಮುಖ್ಯಸ್ಥರಾಗಿದ್ದ ಅಡ್ಮಿರಲ್‌ ಮೈಕ್‌ ಮುಲ್ಲೆನ್ ಬರೆದ ಪತ್ರದ ಕರಡು ಪ್ರತಿಯನ್ನು ಅಮೆರಿಕದಲ್ಲಿರುವ ಪಾಕ್‌ ರಾಯಭಾರಿ ಹುಸೇನ್‌ ಹಕ್ಕಾನಿ ಅವರು ರಚಿಸಿದ್ದರು ಎಂದು ಪಾಕಿಸ್ತಾನ ಮೂಲದ ಅಮೆರಿಕ ಉದ್ಯಮಿ ಮನ್ಸೂರ್‌ ಇಜಾಜ್‌ ಅವರು ಹೇಳಿದ್ದರು. ಈ ಆಪಾದನೆಯನ್ನು ನಿರಾಕರಿಸಿದ ಪಾಕ್‌ ರಾಯಭಾರಿ ಹಕ್ಕಾನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಹಕ್ಕಾನಿ ಅವರು ಇಸ್ಲಾಮಾಬಾ‌ದ್‌ಗೆ ತೆರಳುವ ಮುನ್ನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರದೇಶಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ಮಾರ್ಕ್‌ ಗ್ರಾಸ್‌ಮನ್‌ ಅವರನ್ನು ಅಮೆರಿದ ವಿದೇಶಾಂಗ ಸಚಿವಾಲಯದಲ್ಲಿ ಭೇಟಿಯಾಗಿ ಚರ್ಚಿಸಿದರು ಎನ್ನಲಾಗಿದೆ.

ಗ್ರಾಸ್‌ಮನ್‌ ಅವರ ಭೇಟಿಯ ನಂತರ ಟ್ವೀಟ್ ಮಾಡಿದ್ದ ಹಕ್ಕಾನಿ, ನಾನು ಪಾಕಿಸ್ತಾನಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದರು.

ಜರ್ದಾರಿ ಅವರು ತಮಗೆ ಬರೆದಿದ್ದ ಪತ್ರದ ಬಗ್ಗೆ ಒಲ್ಲದ ಮನಸ್ಸಿನಿಂದ ಪ್ರತಿಕ್ರಿಯಿಸಿದ್ದ ಮುಲ್ಲೆನ್‌, ನಾನು ಈ ರೀತಿಯ ಪತ್ರವನ್ನು ಸ್ವೀಕರಿಸಿದ್ದು ನಿಜ ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ್ದ ಪೆಂಟಾಗನ್‌ ಪತ್ರಿಕಾ ಕಾರ್ಯದರ್ಶಿ ಜಾರ್ಜ್‌ ಲಿಟ್ಲ್‌, ಜರ್ದಾರಿ ಅವರು ಬರೆದಿದ್ದ ಪತ್ರದಿಂದ ಉಂಟಾಗಿದ್ದ ವಿವಾದದ ಬಗ್ಗೆ ರಕ್ಷಣಾ ಕಾರ್ಯದರ್ಶಿ ಲಿಯಾನ್‌ ಪೆನೆಟ್ಟಾ ಅವರಿಗೆ ತಿಳಿದಿತ್ತು ಎಂದು ಹೇಳಿದ್ದಾರೆ.

ಪತ್ರವು ಗಂಭೀರವಾದ ವಿಷಯವನ್ನೊಳಗೊಂಡಿದ್ದರೂ ಅಮೆರಿಕ ಜಂಟಿ ಸೇನಾ ಪಡೆ ಕಚೇರಿಯು ಇದನ್ನು ಏಕೆ ನಿರ್ಲಕ್ಷಿಸಿತ್ತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಿಟ್ಲ್‌, ಈ ಕುರಿತು ಮರುಪರಿಶೀಲನೆಗೆ ಆದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ ಈ ಕುರಿತು ಅಭಿಪ್ರಾಯಪಟ್ಟಿರುವ ಅಮೆರಿಕದ ವಿದೇಶಾಂಗ ಸಚಿವಾಲಯವು ಇದು ಪಾಕಿಸ್ತಾನದ ಆಂತರಿಕ ವಿಷಯವಾಗಿದ್ದು, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದೆ.

ರಹಸ್ಯ ಪತ್ರ ವಿಷಯವನ್ನು ಪಾಕಿಸ್ತಾನದಲ್ಲಿ ದೊಡ್ಡ ಸಂಗತಿಯನ್ನಾಗಿಸಿರುವ ಕುರಿತು ನಮಗೆ ತಿಳಿಸಿದೆ. ಆದರೆ ಇದು ದೇಶೀಯ ವಿದ್ಯಮಾನ. ನಾವು ಇದನ್ನು ಹಾಗೆಯೇ ಭಾವಿಸುತ್ತೇವೆ. ಅಮೆರಿಕದಲ್ಲಿನ ಪಾಕ್‌ ರಾಯಭಾರಿ ಹಕ್ಕಾನಿ ಅವರೊಂದಿಗೆ ಸಂಪರ್ಕದಲ್ಲಿರುತ್ತೇವೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಮಾರ್ಕ್‌ ಟೋನರ್ ತಿಳಿಸಿದ್ದಾರೆ.

ಹಕ್ಕಾನಿ ಅವರು ಈಗಲೂ ಪಾಕ್‌ ರಾಯಭಾರಿ ಎಂದು ನಾವು ಭಾವಿಸಿದ್ದೇವೆ ಹಾಗೂ ನಾವು ನಿಯಮಿತವಾಗಿ ಅವರೊಂದಿಗೆ ಸಂಪರ್ಕದಲ್ಲಿರುತ್ತೇವೆ, ಪಾಕಿಸ್ತಾನದ ಜನರು ಮತ್ತು ಸರಕಾರದೊಂದಿಗೂ ಸಂವಹನ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಹಕ್ಕಾನಿ ಅವರು ತಮ್ಮನ್ನು ಭೇಟಿ ಮಾಡಿದ ನಂತರ ಸುದ್ದಿಗರರೊಂದಿಗೆ ಮಾತನಾಡಿದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರದೇಶಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ಮಾರ್ಕ್‌ ಗ್ರಾಸ್‌ಮನ್‌, ಈ ರಹಸ್ಯ ಪತ್ರವು ಬಹಿರಂಗವಾಗುವವರೆಗೂ ನಾನು ಅದನ್ನು ಗಮನಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ವಿವಾದಾತ್ಮಕ ರಹಸ್ಯ ಪತ್ರದ ಬಗ್ಗೆ ವಿವರಣೆ ನೀಡಲು ಹಕ್ಕಾನಿ ಅವರಿಗೆ ನಿಷ್ಪಕ್ಷಪಾತ ಅವಕಾಶ ದೊರೆತಿದೆ ಎಂದು ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ತಿಳಿಸಿದೆ.

ಈ ಕುರಿತು ಪ್ರತ್ಯೇಕ ಹೇಳಿಕೆ ನೀಡಿರುವ ಪಾಕ್‌ ಪ್ರಧಾನಿ ಯೂಸುಫ್‌ ರಾಜಾ ಗಿಲಾನಿ, ಜರ್ದಾರಿ ಅವರು ರಹಸ್ಯ ಪತ್ರ ವಿವಾದದಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದರು. ಐಎಸ್‌ಐ ಮೊದಲಾದ ರಕ್ಷಣಾ ಸಂಸ್ಥೆಗಳನ್ನು ರಕ್ಷಿಸಲು ತಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ರಹಸ್ಯ ಪತ್ರದ ಕುರಿತು ಸಮಜಾಯಿಷಿ ನೀಡಲು ಹಕ್ಕಾನಿ ಅವರನ್ನು ಇಸ್ಲಾಮಾಬಾದ್‌ಗೆ ಕರೆಸಲಾಗಿತ್ತು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ