ಪಾಕಿಸ್ತಾನದ 150 ಜನಪ್ರತಿನಿಧಿಗಳಿಗೆ ಕೊಲೆ ಬೆದರಿಕೆಯಂತೆ!

ಸೋಮವಾರ, 21 ನವೆಂಬರ್ 2011 (09:27 IST)
ಪಾಕಿಸ್ತಾನದ 150 ಜನಪ್ರತಿನಿಧಿಗಳಿಗೆ ಬೆದರಿಕೆಯ ಎಸ್‌ಎಂಎಸ್‌ ಕಳುಹಿಸಲಾಗಿದೆ ಎಂದು ಪಾಕ್‌ ಆಂತರಿಕ ಸಚಿವ ರೆಹಮಾನ್‌ ಮಲಿಕ್‌ ತಿಳಿಸಿದ್ದಾರೆ. ಜನಪ್ರತಿನಿಧಿಗಳಿಗೆ ಎಸ್‌ಎಂಎಸ್‌ ಕಳುಹಿಸಿರುವ ದುಷ್ಕರ್ಮಿಗಳು, ಜನ ಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು ಎಂದು ತಿಳಿಸಿದ್ದಾರೆ.

ಪಾಕ್‌ ಸಂಸತ್‌ ಉಭಯ ಸದನಗಳು ಹಾಗೂ ನಾಲ್ಕು ಪ್ರಾಂತ್ಯಗಳ ವಿಧಾನ ಸಭೆ ಸದಸ್ಯರಿಗೆ ಬೆದರಿಕೆ ಎಸ್‌ಎಂಎಸ್‌ ಬಂದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಮಲಿಕ್‌ ತಿಳಿಸಿದ್ದಾರೆ.

ಸೈಬರ್‌ ಅಪರಾಧ ವಿಭಾಗದ ಸಹಾಯದಿಂದ ಸಿಂಧ್‌ ಪ್ರಾಂತ್ಯದ ಲಾರ್ಕಾನಾದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ದುಷ್ಕರ್ಮಿಗಳು ಇವರ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎಲ್ಲ ಗಣ್ಯ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳನ್ನು ದುಷ್ಕರ್ಮಿಗಳು ಹೇಗೆ ಪಡೆದು ಕೊಂಡರು ಎಂಬುದರ ಬಗ್ಗೆ ತಮಗೆ ಅಚ್ಚರಿಯಾಗುತ್ತಿದೆ ಎಂದು ಮಲಿಕ್‌ ತಿಳಿಸಿದ್ದಾರೆ.

ಬೆದರಿಕೆ ಎಸ್‌ಎಂಎಸ್‌ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ಸೈಬರ್‌ ಅಪರಾಧ ವಿಭಾಗವು ಶೀಘ್ರದಲ್ಲೇ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ