ಮಲ್ಯರ ಯುನೈಟೆಟ್‌ ಸ್ಪಿರಿಟ್‌ ಕಂಪನಿ ಮಾರಾಟ

ಸುಮಾರು 8 ಸಾವಿರ ಕೋಟಿ ರೂ. ಸಾಲದ ಹೊರೆ ಹೊತ್ತು ಕಂಗೆಟ್ಟಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಒಡೆಯ ವಿಜಯ ಮಲ್ಯ ಇದೀಗ ತಮ್ಮದೇ ಒಡೆತನದ ಯುನೈಟೆಡ್‌ ಸ್ಪಿರಿಟ್ಸ್‌ ಕಂಪನಿಯನ್ನು ಬ್ರಿಟನ್‌ನ ಬೃಹತ್‌ ಮದ್ಯ ತಯಾರಿಕಾ ಕಂಪನಿಯಾದ ಡೈಜಿಯೊಗೆ ಮಾರಾಟ ಮಾಡಲು ಒಪ್ಪಿದ್ದಾರೆ. ಈ ಕುರಿತ ಒಪ್ಪಂದ ಲಂಡನ್‌ನಲ್ಲಿ ಮಲ್ಯ-ಡೈಜಿಯೊ ಮಧ್ಯೆ ಏರ್ಪಟ್ಟಿದೆ.

ಸುಮಾರು 5,500 ಕೋಟಿ ರೂ.ಗೆ ಈ ಒಪ್ಪಂದ ಏರ್ಪಟ್ಟಿದೆ. ಬಹುಪಾಲು ಷೇರನ್ನು ಡೈಜಿಯೊ ಖರೀದಿಸಲಿದೆ. ಒಪ್ಪಂದವು ಸಂಪೂರ್ಣ ಕಾರ್ಯರೂಪಕ್ಕೆ ಬರಲು 6 ತಿಂಗಳು ಹಿಡಿಯಬಹುದು. ಆದರೆ ಕಂಪನಿ ಅಧ್ಯಕ್ಷರಾಗಿ ಮಲ್ಯರೇ ಮುಂದುವರಿಯುವರು ಎಂದು ಕೆಲ ಟೀವಿ ಚಾನೆಲ್‌ಗ‌ಳು ವರದಿ ಮಾಡಿವೆ.

ಇತ್ತೀಚೆಗಷ್ಟೇ ತಮ್ಮದೇ ಸೋದರ ಕಂಪನಿಗಳಿಂದಲೇ ಹಣ ವರ್ಗಾಯಿಸಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಪುನಶ್ಚೇತನ ಯೋಜನೆಯನ್ನು ಸರ್ಕಾರಕ್ಕೆ ನೀಡಿ, ಅಮಾನತಾಗಿರುವ ಏರ್‌ಲೈನ್ಸ್‌ ಲೈಸೆನ್ಸನ್ನು ಮರಳಿ ಪಡೆಯುವುದಾಗಿ ಮಲ್ಯ ಹೇಳಿಕೊಂಡಿದ್ದರು. ಹೀಗಾಗಿ ಸ್ಪಿರಿಟ್ಸ್‌ ಮಾರಾಟದ ಹಣವನ್ನು ಕಿಂಗ್‌ಫಿಶರ್‌ ಪುನಶ್ಚೇತನಕ್ಕೆ ಮಲ್ಯ ಬಳಸಲಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಕಿಂಗ್‌ಫಿಶರ್‌ಗೆ ಅತಿಹೆಚ್ಚು ಸಾಲ ನೀಡಿದ ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ, 'ಕಿಂಗ್‌ಫಿಶರ್‌ ಸಾಲವನ್ನು ಮರುಪರಿಶೀಲಿಸಬೇಕಾದರೆ 5500 ಕೋಟಿ ರೂ. ಹೊಂದಿಸುವಂತೆ ಎಂದು ಹೇಳಿತ್ತು. ಎಸ್‌ಬಿಐನ ಹೇಳಿಕೆಗೆ ಪೂರಕವೆಂಬಂತೆ ಮಲ್ಯ ಅವರು 5500 ಕೋಟಿಗೆ ಯುನೈಟೆಟ್‌ ಸ್ಪಿರಿಟ್‌ ಕಂಪನಿ ಮಾರಾಟದ ಸುದ್ದಿ ಬಂದಿದೆ.

ವೆಬ್ದುನಿಯಾವನ್ನು ಓದಿ