ತಮಿಳುನಾಡು: ಆಡ್ವಾಣಿ ಯಾತ್ರೆಯ ಮಾರ್ಗದಲ್ಲಿ ಬಾಂಬ್ ಪತ್ತೆ

ಶುಕ್ರವಾರ, 28 ಅಕ್ಟೋಬರ್ 2011 (11:58 IST)
PTI
ಬಿಜೆಪಿ ಹಿರಿಯ ನಾಯಕ ಎಲ್. ಕೆ.ಆಡ್ವಾಣಿ ನೇತೃತ್ವದ ಜನ ಚೇತನಾ ಯಾತ್ರೆ ತಮಿಳುನಾಡಿನ ಮಧುರೈ ಜಿಲ್ಲೆಯಿಂದ ಸಾಗುವ ಸಂದರ್ಭದಲ್ಲಿ ಸೇತುವೆ ಬಳಿ ಬಾಂಬ್ ಪತ್ತೆಯಾಗಿದೆ. ಬಾಂಬ್ ನಿಷ್ಕ್ರೀಯ ದಳ ಸ್ಫೋಟಕವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದರೂ ಭದ್ರತಾ ಲೋಪ ಎದ್ದು ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆರಂಭಿಕ ವರದಿಗಳ ಪ್ರಕಾರ, ಮಧುರೈ ನಗರದಿಂದ 30 ಕಿ.ಮೀ ದೂರದಲ್ಲಿರುವ ತಿರುಮಂಗಲಂ ಪಟ್ಟಣದ ಅಲಮ್‌ಪಟ್ಟಿ ಗ್ರಾಮದ ಬಳಿಯಿರುವ ಸೇತುವೆಯ ಕೆಳಗೆ ಪೈಪ್ ಮಾದರಿಯಲ್ಲಿರುವ ಬಾಂಬ್ ಅಳವಡಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಡ್ವಾಣಿ ಯಾತ್ರೆ ಕೇವಲ 20 ನಿಮಿಷಗಳಲ್ಲಿ ಸೇತುವೆಯನ್ನು ದಾಟಿ ಮುಂದೆ ಸಾಗುವ ಕಾರ್ಯಕ್ರಮವಿತ್ತು. ಆದರೆ, ಅದಕ್ಕಿಂತ ಮುಂಚೆ ಭದ್ರತಾ ಪಡೆಗಳು ಬಾಂಬ್‌ ನಿಷ್ಟ್ರೀಯಗೊಳಿಸುವಲ್ಲಿ ಯಶಸ್ವಿಯಾದವು. ರಥಯಾತ್ರೆಯ ಮಾರ್ಗವನ್ನು ಬದಲಿಸುವಂತೆ ಭದ್ರತಾ ಕೋರಲಾಗಿದೆ. ಆಡ್ವಾಣಿ ತೆರಳುವ ಮಾರ್ಗದಲ್ಲಿ ಭಾರಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾಪಡೆಗಳು ಮತ್ತು ತಮಿಳುನಾಡು ಪೊಲೀಸ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟಕ ಪತ್ತೆಯಾಗಿರುವ ಬಗ್ಗೆ ಆಡ್ವಾಣಿಯವರಿಗೆ ಮಾಹಿತಿ ನೀಡಲಾಯಿತಾದರೂ ಯಾತ್ರೆಯನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ಆಡ್ವಾಣಿಯವರ ಜನ ಚೇತನಾ ಯಾತ್ರೆ ತಮಿಳುನಾಡಿನ ಮಧುರೈ, ತಿರುನೆಲ್‌ವೆಲಿ ಮತ್ತು ವಿರುಧ್‌ನಗರ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಕೇರಳ ಗಡಿಯನ್ನು ಪ್ರವೇಶಿಸುವ ಮುನ್ನ ಆಡ್ವಾಣಿ ಇಂದು ಸಂಜೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ