ಎಲ್‌ಪಿಜಿ, ಡೀಸೆಲ್ ದರ ಹೆಚ್ಚಿಸಿದ್ರೆ ಬೆಂಬಲ ಹಿಂದಕ್ಕೆ: ಮಮತಾ

ಬುಧವಾರ, 9 ನವೆಂಬರ್ 2011 (13:57 IST)
PTI
ಕೇಂದ್ರ ಸರಕಾರ ಅಡುಗೆ ಅನಿಲ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿದಲ್ಲಿ ಯುಪಿಎ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವುದಾಗಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಕೇಂದ್ರ ಸರಕಾರಕ್ಕೆಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪೆಟ್ರೋಲ್ ದರ ಹೆಚ್ಚಳವನ್ನು ಹಿಂಪಡೆಯದಿದ್ದಲ್ಲಿ ಬೆಂಬಲ ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ, ಇದೀಗ, ಕೇಂದ್ರ ಸರಕಾರದಿಂದ 19000 ಕೋಟಿ ರೂಪಾಯಿಗಳ ಪ್ಯಾಕೇಜ್ ಪಡೆದು ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ.

ಪೆಟ್ರೋಲ್ ದರ ಹೆಚ್ಚಳವನ್ನು ಹಿಂಪಡೆಯುವಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು ಪ್ರಧಾನಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಆದರೆ, ಪೆಟ್ರೋಲ್ ದರ ಏರಿಕೆಯನ್ನು ಹಿಂಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಡೀಸೆಲ್ ಮತ್ತು ಸೀಮೆ ಎಣ್ಣೆ ದರವನ್ನು ಹೆಚ್ಚಿಸುವುದಿಲ್ಲ ಎಂದು ಭರವಸೆ ಕೂಡಾ ನೀಡುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪಶ್ಚಿಮ ಬಂಗಾಳಕ್ಕೆ 19 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್‌ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮುಂಬರುವ ದಿನಗಳಲ್ಲಿ ಮತ್ತೆ ಪೆಟ್ರೋಲ್ ದರ ಏರಿಕೆ ಮಾಡಿದಲ್ಲಿ, ಯುಪಿಎ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವುದು ಖಚಿತ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರ ಸಮನ್ವಯ ಸಮಿತಿ ರಚಿಸುವ ಬೇಡಿಕೆಯನ್ನು ಕೂಡಾ ಪ್ರಧಾನಿ ಮನಮೋಹನ್ ಸಿಂಗ್ ತಳ್ಳಿಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ