ಮೈತ್ರಿ ಬೇಕೋ ಬೇಡವೋ ನೀವೇ ನಿರ್ಧರಿಸಿ: ಕಾಂಗ್ರೆಸ್‌ಗೆ ಮಮತಾ

ಶನಿವಾರ, 19 ನವೆಂಬರ್ 2011 (16:05 IST)
PTI
ಯುವ ಕಾಂಗ್ರೆಸ್ ಪದಾಧಿಕಾರಿಗಳು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಲ್ಲದೇ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದರಿಂದ ಕೆಂಡಾಮಂಡಲವಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಮ್ಮ ಜೊತೆ ಇರಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ನಿರ್ಧರಿಸಿ ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ರಾಜ್ಯದಲ್ಲಿ ಸರಕಾರ ನಡೆಸಲು ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಮೈತ್ರಿಯನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎನ್ನುವ ಕುರಿತಂತೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿ ಎಂದು ಹೇಳಿದ್ದಾರೆ.

ಎಡಪಕ್ಷಗಳೊಂದಿಗೆ ಸಂಬಂಧವಿರುವ ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿಲ್ಲ. ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮತ್ತು ಪರೋಕ್ಷವಾಗಿ ಸಿಪಿಐಗೆ ಬೆಂಬಲ ನೀಡುವಂತಹ ಕೃತ್ಯಗಳನ್ನು ಕಾಂಗ್ರೆಸ್ ಈ ಹಿಂದೆ ಮಾಡಿದೆ. ಮತ್ತೆ ಪುನರಾವರ್ತನೆಯಾದಲ್ಲಿ ಮೈತ್ರಿ ಅಂತ್ಯ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕೆಲ ನಾಯಕರು ವಸ್ತು ಸ್ಥಿತಿಯನ್ನು ಅರಿಯದೆ ನಮ್ಮನ್ನು ಟೀಕಿಸುತ್ತಿದ್ದಾರೆ.ನಾವು ಕೂಡಾ ಅವರನ್ನು ಟೀಕಿಸಬಹುದು. ಆದರೆ, ಆರೋಪ ಪ್ರತ್ಯಾರೋಪಗಳಲ್ಲಿ ನಮಗೆ ನಂಬಿಕೆಯಿಲ್ಲ.ದೆಹಲಿ ಮತ್ತು ಪಶ್ಚಿಮ ಬಂಗಾಳ ಸರಕಾರದಲ್ಲಿ ಭಿನ್ನತೆಯಿದೆ. ಪಶ್ಚಿಮ ಬಂಗಾಳದಲ್ಲಿ ಜನತೆ ನಮ್ಮನ್ನು ಸಂಪೂರ್ಣ ಬಹುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಮಮತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ