ಯುಪಿಎ ಅತ್ಯಂತ ಭ್ರಷ್ಟ ಸರ್ಕಾರ; ಜನಚೇತನಾ ಯಾತ್ರೆಗೆ ತೆರೆ

ಭಾನುವಾರ, 20 ನವೆಂಬರ್ 2011 (15:49 IST)
PTI
ಕಪ್ಪು ಹಣ ವಾಪಸಾತಿ ಮತ್ತು ಭ್ರಷ್ಟಾಚಾರದ ವಿರುದ್ಧ ನಡೆಸಿದ ಈ ಯಾತ್ರೆಗೆ ಹಿಂದೆಂದೂ ದೊರೆಯದಷ್ಟು ಭಾರೀ ಜನ ಬೆಂಬಲ ದೊರೆತಿದೆ. ಜನಚೇತನ ಯಾತ್ರೆ ಅಂತಿಮಗೊಂಡಿದೆ. ಆದರೆ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಘೋಷಿಸಿದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾನುವಾರ ಇಲ್ಲಿನ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಕಪ್ಪು ಹಣ ವಾಪಸಾತಿ ಹಾಗೂ ಭ್ರಷ್ಟಾಚಾರದ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ದೇಶಾದ್ಯಂತ 40 ದಿನಗಳ ಕಾಲ ನಡೆಸಿದ ಜನಚೇತನ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಜನಚೇತನಾ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತಿವಾಗಿತ್ತು. ಹಿರಿಯ ಮುಖಂಡ ವಾಜಪೇಯಿ ಅನಾರೋಗ್ಯದ ಕಾರಣದಿಂದ ನಮ್ಮ ಜತೆಗೆ ಇಲ್ಲದಿರುವುದು ದೊಡ್ಡ ಕೊರತೆಯಾಗಿತ್ತು. ಆದರೂ ದೇಶದ 22 ರಾಜ್ಯ ಹಾಗೂ ಐದು ಕೇಂದ್ರಾಡಳಿತ ಪ್ರದೇಶದಲ್ಲಿ ಭಾರೀ ಬೆಂಬಲ ದೊರೆತಿತ್ತು ಎಂದರು.

ತಮಿಳುನಾಡಿನಲ್ಲಿ ನಮ್ಮ ಪಕ್ಷದ ಶಾಸಕರು, ಸಂಸದರು ಇಲ್ಲ, ಆದರೂ ಕೂಡ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಅಪಾರ ಪ್ರಮಾಣದಲ್ಲಿ ಜನ ಸಾಗರವೇ ಸೇರಿತ್ತು ಎಂದು ತಮ್ಮ 38 ದಿನಗಳ ಜನಚೇತನಾ ಯಾತ್ರೆಯ ಅನುಭವವನ್ನು ಬಿಚ್ಚಿಟ್ಟರು.
ಪ್ರಧಾನಿ ಮನಮೋಹನ್ ಸಿಂಗ್ ಅವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರೂ ಕೂಡ ಹಣದುಬ್ಬರ ದಿನೇ ದಿನೇ ಏರಿಕೆಯಾಗುತ್ತಿದೆ. ಹಾಗಾಗಿ ಯುಪಿಎ ವಿರುದ್ಧ ಜನಾಕ್ರೋಶ ಇದೆ ಎಂದರು.

ಭ್ರಷ್ಟಾಚಾರದಿಂದ ಕೇಂದ್ರ ಸಚಿವರು ಜೈಲು ಸೇರುತ್ತಿದ್ದರೂ ಕೂಡ ಸರ್ಕಾರಕ್ಕೆ ಯಾವುದೇ ಚಿಂತೆ ಇಲ್ಲ. ಭ್ರಷ್ಟಾಚಾರದಿಂದಾಗಿ ಪ್ರಧಾನಿ ಹುದ್ದೆಗೆ ಧಕ್ಕೆ ಬಂದಿದೆ ಎಂದು ಹೇಳುವ ಮೂಲಕ ತಮ್ಮ ಮಾತಿನುದ್ದಕ್ಕೂ ಯುಪಿಎ ವಿರುದ್ಧ ವಾಗ್ದಾಳಿ ನಡೆಸಿದರು.

ಯುಪಿಎ ಅತ್ಯಂತ ಭ್ರಷ್ಟ ಸರ್ಕಾರ. ಆ ನಿಟ್ಟಿನಲ್ಲಿ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಪೂರ್ಣವಾಗಿಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಅಂತ್ಯವಿಲ್ಲ. ಅವೆಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರ ತಡೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇರುವುದಾಗಿ ಆಡ್ವಾಣಿ ಅಭಿಪ್ರಾಯಪಟ್ಟರು.

ಯುಪಿಎ ಸರ್ಕಾರಕ್ಕೆ ಕಪ್ಪು ಹಣದ ವಾಪಸಾತಿ ಬಗ್ಗೆಯೂ ಕಾಳಜಿ ಇಲ್ಲ. ಆ ಬಗ್ಗೆ ಮಾಹಿತಿಯೂ ನೀಡುತ್ತಿಲ್ಲ. ಭ್ರಷ್ಟಾಚಾರ ಮಟ್ಟಹಾಕಲೂ ಮುಂದಾಗುತ್ತಿಲ್ಲ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಬೇಕು. ಬಲಿಷ್ಠ ಜನಲೋಕಪಾಲ್ ಮಸೂದೆ ಜಾರಿಯಾಗಲೇಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಜನಚೇತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾಂಗ್ರೆಸ್ ವಿರುದ್ಧ ಶರದ್ ಯಾದವ್ ವಾಗ್ದಾಳಿ:
ಆಡ್ವಾಣಿ ಭಾಷಣಕ್ಕೂ ಮುನ್ನ ಸಮಾರೋಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಜೆಡಿಯು ವರಿಷ್ಠ ಶರದ್ ಯಾದವ್ ಮಾತನಾಡಿ, 2ಜಿ ಹಗರಣ ಹಾಗೂ ಓಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ಪಕ್ಷದ ಮುಖಂಡರ ಬಗ್ಗೆ ಮೃದು ಧೋರಣೆ ತಳೆದಿರುವುದಾಗಿ ಆರೋಪಿಸಿದರು.

ಯಾವಾಗ ನಾವು ಭ್ರಷ್ಟಾಚಾರದ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದೆವೋ ಆವಾಗ ಸರ್ಕಾರ ಕೆಲವರನ್ನು ಜೈಲಿಗೆ ಕಳುಹಿಸಿದೆ ಎಂದು ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇವಲ ಒಬ್ಬ ಕಾಂಗ್ರೆಸ್ ಮುಖಂಡ ಮಾತ್ರ (ಸುರೇಶ್ ಕಲ್ಮಾಡಿ) ಜೈಲಿನಲ್ಲಿದ್ದಾರೆ. ಓಟಿಗಾಗಿ ನೋಟು ಹಗರಣವನ್ನೇ ಗಮನಿಸಿ ಒಬ್ಬನೇ ಒಬ್ಬ ಕಾಂಗ್ರೆಸ್ ಮುಖಂಡನ ಬಂಧನವಾಗಿಲ್ಲ. ಆದರೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ವಿರೋಧ ಪಕ್ಷಗಳ ಮುಖಂಡರನ್ನೇ ಜೈಲಿಗೆ ಅಟ್ಟಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ (ಕಾಂಗ್ರೆಸ್) ಪಾಪಕೃತ್ಯಕ್ಕೆ ನೀವು ಬದ್ಧರಾಗಿದ್ದೀರಿ, ಅಷ್ಟೇ ಅಲ್ಲ ನೆನಪಿರಲಿ ನಿಮ್ಮ ಪಾಪಕ್ಕೆ ನೀವು ತಕ್ಕ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

ವೆಬ್ದುನಿಯಾವನ್ನು ಓದಿ