ಪರೀಕ್ಷೆ, ಸಂದರ್ಶನ ಪಾಸ್ ಆದ್ರೆ ಪಕ್ಷದ ಟಿಕೆಟ್!; ರಾಜ್ ಠಾಕ್ರೆ ಐಡಿಯಾ

ಸೋಮವಾರ, 21 ನವೆಂಬರ್ 2011 (10:14 IST)
PR
ರಾಜಕಾರಣಕ್ಕೆ ವಿದ್ಯಾಭ್ಯಾಸದ ಅಗತ್ಯವಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವುದೇ. ಆದರೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ವೇದಿಕೆ (ಎಂಎನ್ಎಸ್)ಯಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಬೇಕಿದ್ದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು!.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಭ್ಯರ್ಥಿಗಳ ಸಾಂಪ್ರದಾಯಿಕ ಆಯ್ಕೆ ಕೈಬಿಟ್ಟು ಹೊಸ ವಿಧಾನ ಕಂಡುಕೊಳ್ಳಲು ಮುಂದಾಗಿದ್ದಾರೆ ರಾಜ್ ಠಾಕ್ರೆ. 2012ರ ಫೆಬ್ರುವರಿಯಲ್ಲಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಅದಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಗಾಗಿ ಡಿಸೆಂಬರ್ 4ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ಅದರಲ್ಲಿ ಉತ್ತಮ ಅಂಕ ಪಡೆದವರನ್ನು ಠಾಕ್ರೆಯೇ ಖುದ್ದಾಗಿ ಸಂದರ್ಶನ ನಡೆಸಲಿದ್ದಾರೆ. ಅದರಲ್ಲೂ ಉತ್ತೀರ್ಣರಾದರೆ ಎಂಎಸ್ಎಸ್ ಟಿಕೆಟ್ ಕಟ್ಟಿಟ್ಟ ಬುತ್ತಿ.

ಸಾಮಾನ್ಯ ಆಡಳಿತ, ಜನರ ಸಮಸ್ಯೆಗಳ ಬಗ್ಗೆ ಅಭ್ಯರ್ಥಿಗಳಿಗಿರಬೇಕಾದ ತಿಳಿವಳಿಕೆ ಪರೀಕ್ಷಿಸಲು ಈ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು ಅವಧಿ ಎರಡೂವರೆ ಗಂಟೆ ಎಂದು ಮುಂಬೈನಲ್ಲಿ ನಡೆದ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. ಹಾಲಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸದಸ್ಯರು, ಹೊಸದಾಗಿ ಟಿಕೆಟ್ ಬಯಸುವವರೂ ಪರೀಕ್ಷೆ ಎದುರಿಸುವುದು ಕಡ್ಡಾಯ. ಥಾಣೆ, ನಾಸಿಕ್ ನಾಗ್ಪುರಗಳಲ್ಲೂ ಅಭ್ಯರ್ಥಿಗಳ ಆಯ್ಕೆಗೆ ಇದೀ ಕ್ರಮ ಅನುಸರಿಸಲಾಗುತ್ತಿದೆ.

ಇದರ ಸಂಪೂರ್ಣ ಉಸ್ತುವಾರಿ ನನ್ನದ್ದೇ, ಯಾವುದೇ ಪ್ರಭಾವ, ತೋಳ್ಬಲ ಪ್ರದರ್ಶನಕ್ಕೆ ಅವಕಾಶ ಇಲ್ಲ ಎಂದಿದ್ದಾರೆ ರಾಜ್ ಠಾಕ್ರೆ. ಅಲ್ಲದೇ ಒಂದು ವೇಳೆ ತಮಗೂ ಸ್ಪರ್ಧಿಸುವ ಇಚ್ಛೆ ಉಂಟಾದರೆ ತಾವೂ ಪರೀಕ್ಷೆ ಬರೆಯಲು ಸಿದ್ದ. ಅದರ ಮೌಲ್ಯ ಮಾಪನ ಮತ್ತೊಂದು ಸಮಿತಿ ನಡೆಸಲಿ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ