ಕಾಂಗ್ರೆಸ್-ಮಮತಾ ಮಧ್ಯೆ ಮುಸುಕಿನ ಗುದ್ದಾಟ

ಗುರುವಾರ, 5 ಜನವರಿ 2012 (20:05 IST)
PTI
ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ನಡುವಣ ಗೆಳೆತನದಲ್ಲಿ ಒಡಕು ಮೂಡಿದೆ.

ತೃಣಮೂಲ ಕಾಂಗ್ರೆಸ್ ಪಕ್ಷವು ಸಿಪಿಎಂ ಪಕ್ಷದ ಬಿ ತಂಡದಂತೆ ಕೆಲಸ ಮಾಡುತ್ತಿದೆಯಲ್ಲದೆ ಬಿಜೆಪಿಯ ಆಜ್ಞೆಗಳನ್ನೂ ಪಾಲಿಸುತ್ತಿರುವಂತಿದೆ` ಎಂದು ಕಾಂಗ್ರೆಸ್ ಸಂಸದೆ ದೀಪಾ ದಾಸ್‌ಮುನ್ಶಿ ಮಂಗಳವಾರ ಹೇಳಿದ್ದ ಮಾತುಗಳು ಬುಧವಾರ ತೃಣಮೂಲ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ.

PTI
ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಯತ್ನವನ್ನು ಸಿಪಿಎಂ ವಿರೋಧಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಮಾತ್ರ ಸಿಪಿಎಂ ಜೊತೆ ಕೈಜೋಡಿಸಿ ವಿಶ್ವಾಸಘಾತುಕತನ ಎಸಗಿದೆ ಎಂದೂ ದೀಪಾ ಅವರು ಟೀಕಿಸಿದ್ದರು.

ದೀಪಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಸರ್ಕಾರದ ಕ್ರೀಡಾ ಸಚಿವ ಮದನ್ ಮಿತ್ರ ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುವ ಕಸರತ್ತು ನಡೆಸುವುದಕ್ಕಿಂತ, ಧೈರ್ಯವಿದ್ದರೆ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ನೋಡೋಣ` ಎಂದಿದ್ದಾರೆ.

ಇನ್ನೊಬ್ಬ ಸಚಿವ ಹಕೀಮ್ ಮಾತನಾಡಿ ತೃಣಮೂಲ ಕಾಂಗ್ರೆಸ್‌ನ ಬೆಂಬಲವಿಲ್ಲದಿದ್ದರೆ, ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನಾಮಾವಶೇಷಗೊಳ್ಳುತ್ತದೆ, ಅಷ್ಟೇ` ಎಂದಿದ್ದಾರೆ.

ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್‌ನ ನಂತರ ಅತಿ ದೊಡ್ಡ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್‌ನ ವಿರೋಧ ಕಟ್ಟಿಕೊಂಡರೆ ಯುಪಿಎ ಸರ್ಕಾರದ ಉಳಿವು ಕಷ್ಟ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ.

ಆದರೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 180 ಸ್ಥಾನಗಳನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಅವಲಂಬಿಸಿಲ್ಲ. ಆದರೂ ಆ ಪಕ್ಷವನ್ನು ತನ್ನ ಸರ್ಕಾರದೊಳಗೆ ಸೇರಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ