ಬೆಂಕಿ ಅನಾಹುತ: ಕೂದಲೆಳೆ ಅಂತರದಲ್ಲಿ ಪಾರಾದ ಮಮತಾ ಬ್ಯಾನರ್ಜಿ

ಶುಕ್ರವಾರ, 18 ಏಪ್ರಿಲ್ 2014 (18:30 IST)
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏಪ್ರಿಲ್ 24 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಮಾಲ್ಡಾ ಜಿಲ್ಲೆಯ ಹೋಟೆಲ್ ಕೋಣೆಯೊಂದರಲ್ಲಿ ಉಳಿದುಕೊಂಡಿದ್ದು,, ಕೋಣೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ ಎಂದು ವರದಿಯಾಗಿದೆ.
PTI

ಸಂಜೆ ಸುಮಾರು 6,40ರ ಸುಮಾರಿಗೆ ಅವರು ಶೌಚಾಲಯದ ಒಳಗೆ ಇದ್ದ ಸಂದರ್ಭದಲ್ಲಿ ಕೋಣೆಯಲ್ಲಿದ್ದ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ವ್ಯಾಪಿಸಿದ ಹೊಗೆಗೆ ಉಸಿರಾಡಲು ಕಷ್ಟವಾದಾಗ ಆಕೆ ತನ್ನ ಸಹಾಯಕ ಜೈದೀಪ್‌ರನ್ನು ಕೂಗಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಕೆಯ ಕೂಗನ್ನು ಕೇಳಿ ಸಹಾಯಕ್ಕೆ ಧಾವಿಸಿದ ಜೈದೀಪ್ ಅವರಿಗೆ ಬ್ಲಾಂಕೆಟ್‌ನ್ನು ಸುತ್ತಿಕೋಣೆಯಿಂದ ಎಳೆದು ತಂದರು. ಕೋಣೆ ಹೊಗೆಯಿಂದ ತುಂಬಿತ್ತು ಎಂದು ರಾಜ್ಯ ಸಾರಿಗೆ ಸಚಿವ ಮದನ್ ಮಿತ್ರ ಜೊತೆಗಿದ್ದ ಬಾಲಿವುಡ್ ನಟ ಕಂ ರಾಜ್ಯಸಭಾ ಸದಸ್ಯ ಮಿಥುನ್ ಚಕ್ರವರ್ತಿ ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕಾಗಮಿಸಿದ ವೈದ್ಯರು ಅವರನ್ನು ಪರೀಕ್ಷಿಸಿದ್ದಾರೆ. ಅಗ್ನಿಶಾಮಕದಳದವರು ಬೇಗ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬ್ಯಾನರ್ಜಿಯವರು ಆರೋಗ್ಯವಾಗಿದ್ದಾರೆ ಎಂದು ಮಿತ್ರ ತಿಳಿಸಿದ್ದಾರೆ.

ಘಟನೆಯನ್ನು ತನಿಖೆಗೊಳಪಡಿಸಿರುವ ಪೋಲಿಸರು ಶಾರ್ಟ್ ಶರ್ಕ್ಯೂಟಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿಸಿದ್ದಾರೆ. ಬೆಂಕಿ ಹತ್ತಿಕೊಂಡಿರುವುದರ ಹಿಂದೆ ಸಂಚಿನ ಕೈವಾಡವಿದೆ ಎಂದು ಮದನ್ ಮಿತ್ರ ಶಂಕೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ