ಸುಪ್ರಿಯಾ ಸುಳೆಗೆ ವೋಟ್ ನೀಡದಿದ್ದರೆ ನಿಮಗೆ ನೀರಿಲ್ಲ ಎಂದು ಬೆದರಿಕೆ ಹಾಕಿದ ಅಜಿತ್ ಪವಾರ್

ಶುಕ್ರವಾರ, 18 ಏಪ್ರಿಲ್ 2014 (19:10 IST)
ಎನ್ಸಿಪಿ ಅಭ್ಯರ್ಥಿ, ಮತ್ತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಪುತ್ರಿ ಸುಪ್ರೀಯಾ ಸುಳೆಗೆ ಮತ ನೀಡದಿದ್ದರೆ ನಿಮಗೆ ನೀಡಲಾಗುತ್ತಿರುವ ನೀರು ಸರಬರಾಜನ್ನು ಕತ್ತರಿಸುತ್ತೇವೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಹಳ್ಳಿಗರಿಗೆ ಬೆದರಿಕೆ ಹಾಕಿದ್ದಾರೆ ಬಾರಾಮತಿ ಲೋಕಸಭಾ ಕ್ಷೇತ್ರದ ಆಪ್ ಪಕ್ಷದ ಅಭ್ಯರ್ಥಿ ಆರೋಪಿಸಿದ್ದಾರೆ.
PTI

ಪುಣೆ ಜಿಲ್ಲೆಯ ಬಾರಾಮತಿ ಕ್ಷೇತ್ರದಲ್ಲಿರುವ ಮಸಾಲವಾಡಿ ಎಂಬ ಗ್ರಾಮದಲ್ಲಿ 16 ಎಪ್ರೀಲ್ ನಂದು ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದ ವೇಳೆ ಅಜಿತ್ ಪವಾರ್ ಮೋಟ್ ನೀಡದಿದ್ದರೆ ನೀರಿನ ಸರಬರಾಜನ್ನು ನಿಲ್ಲಿಸುತ್ತೇವೆ ಎಂದಿದ್ದು ದೂರದರ್ಶನದಲ್ಲಿ ಕೂಡ ಪ್ರಸಾರವಾಗಿದೆ ಎಂದು ಆಪ್ ಅಭ್ಯರ್ಥಿ ಸುರೇಶ ಥೋಪಡೆ ವಡಗಾಂವ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತ "ಈ ಊರಿನಲ್ಲಿ ಯಾರಾದರೂ ಸುಪ್ರೀಯಾ ಸುಳೆಗೆ ಮತ ಚಲಾಯಿಸದಿದ್ದರೆ ನಾನು ಅವರಿಗೆ ನೀಡಲಾಗಿರುವ ನೀರಿನ ಸಂಪರ್ಕವನ್ನು ಕತ್ತರಿಸುತ್ತೇನೆ" ಎಂದು ಪವಾರ್ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

'ಜನರು ಪವಾರ್ ಬಳಿ ನಮಗೆ ಅಗತ್ಯವಿದ್ದಷ್ಟು ನೀರು ಸಿಗುತ್ತಿಲ್ಲ' ಎಂದು ಸಮಸ್ಯೆಯನ್ನು ಹೇಳಿಕೊಂಡಾಗ ಅವರು ಈ ಉತ್ತರವನ್ನು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಪೋಲಿಸ್ ನಿರೀಕ್ಷಕರಾದ ವಿಲಾಸ್ ಭೋಸ್ಲೆ, "ಥೋಪಡೆ ಅವರ ದೂರನ್ನು ಸ್ವೀಕರಿಸಲಾಗಿದೆ. ಆದರೆ ಪವಾರ್ ಮೇಲೆ ಇನ್ನೂ ಪ್ರಕರಣವನ್ನು ದಾಖಲಿಸಲಾಗಿಲ್ಲ. ಚುನಾವಣಾ ಆಯೋಗದ ಅಧಿಕಾರಿಗಳು ಆ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಎಂದು ತನಿಖೆ ನಡೆಸಬೇಕಾಗಿದೆ" ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ