ಮದುವೆ ದಿಬ್ಬಣದ ಮೇಲೆ ಟ್ರಕ್ ಹರಿದು 8 ಜನರ ಸಾವು

ಶನಿವಾರ, 19 ಏಪ್ರಿಲ್ 2014 (12:59 IST)
ಧನಬಾದ್ ನಗರದಿಂದ ಸುಮಾರು 45 ಕೀ ಮಿ ದೂರದ ಮುಗಾಮ್ ಎಂಬ ಊರಿನ ಸಮೀಪದ ಜಿಟಿರಸ್ತೆಯಲ್ಲಿ ಮದುವೆ ಮೆರವಣಿಗೆಯೊಂದರ ಮೇಲೆ ಲಾರಿ ಹರಿದು 8 ಜನರು ದುರ್ಮರಣವನ್ನಪ್ಪಿ, 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
PTI

ಸಾವಿಗೀಡಾಗಿರುವವರಲ್ಲಿ ಮದುಮಗನ ತಂದೆಯೂ ಸೇರಿದ್ದಾನೆಂದು ತಿಳಿದು ಬಂದಿದೆ.

ಅಕ್ರಮ ಕಲ್ಲಿದ್ದಲನ್ನು ತುಂಬಿಕೊಂಡು ಬರುತ್ತಿದ್ದ ಟ್ರಕ್ ನಿರಸಾ ಮಾರುಕಟ್ಟೆಯ ಸಮೀಪ ಒಂದು ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಅಲ್ಲಿ ನಿಲ್ಲಿಸದೇ ವೇಗವಾಗಿ ಬರುತ್ತಿತ್ತು. ನಂತರ ಮದುವೆ ಮೆರವಣಿಗೆಯ ಮೇಲೆ ಹರಿದು 8 ಜನರ ಅಕಾಲಿಕ ಸಾವಿಗೆ ಕಾರಣವಾಗಿದೆ. ರಾತ್ರಿ ಸುಮಾರು 10.30 ರ ಸುಮಾರಿಗೆ ಘಟನೆ ನಡೆದಿದ್ದು, ಆ ಸಮಯದಲ್ಲಿ ಅವರೆಲ್ಲರೂ ವಧುವಿನ ಮನೆ ಕಡೆ ನಡೆದು ಹೊರಟಿದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಘಟನೆಯಲ್ಲಿ 4 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, ವರನ ತಂದೆಯ ಸಮೇತ ಉಳಿದ 4 ಜನ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟರು. ಗಾಯಗೊಂಡಿರುವ 6 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ದಿಬ್ಬಣ ಜೆಮಶೆಡ್‌ಪುರದ ಬಾರಿಹಿಡ್ ಕಡೆಯಿಂದ ನಿರಸಾ ಬ್ಲಾಕ್‌ನ ಮನ್‌ಮನ್‌ಡಿಬ್ ಕೋಲಿಯಾರಿ ಕಾಲೋನಿಗೆ ಹೋಗುತ್ತಿತ್ತು.

ಉದ್ರಿಕ್ತರಾದ ಸ್ಥಳೀಯರು ಟ್ರಕ್‌ನ್ನು ಸುಟ್ಟು ಹಾಕಿದರು ಮತ್ತು ರಾಷ್ಟ್ರೀಯ ಹೆದ್ದಾರಿ ಸಂ 2ನ್ನು ಸುಮಾರು ಎರಡು ಗಂಟೆಗಳ ಕಾಲ ತಡೆಗಟ್ಟಿದರು. ಟ್ರಕ್ ಚಾಲಕ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ