ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಶನಿವಾರ, 19 ಏಪ್ರಿಲ್ 2014 (14:24 IST)
ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಶಿಯವರ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ವರದಿಯಾಗಿದೆ.
PTI

ಅಲ್ಲದೇ ವೇದಿಕೆಯಲ್ಲಿ ಎತ್ತರದ ಕುರ್ಚಿಯಲ್ಲಿ ಜೋಶಿಯವರಿಗೆ ಕುಳಿತುಕೊಳ್ಳಲು ಹೇಳಿದ ಮೋದಿ, ಅವರು ಕುಳಿತು ಕೊಂಡರು ಎಂದು ಖಾತರಿ ಪಡಿಸಿಕೊಂಡು, ಕೊನೆಯಲ್ಲಿ ಉಳಿದ ಕುರ್ಚಿಯಲ್ಲಿ ತಾವು ಕುಳಿತುಕೊಂಡರು.

ತಾವು ಪ್ರಧಾನಮಂತ್ರಿ ಪದವಿಯ ಅಭ್ಯರ್ಥಿಯಾಗಿದ್ದುಕೊಂಡು ಜೋಶಿಯವರನ್ನು ಉನ್ನತರು ಎನ್ನುವಂತೆ ನಡೆದುಕೊಂಡ ಮೋದಿ ವರ್ತನೆ ಪಕ್ಷದ ಅನೇಕ ನಾಯಕರನ್ನು ಆಶ್ಚರ್ಯಕ್ಕೀಡು ಮಾಡಿದೆ.

ಮೋದಿಯ ಈ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಕಾನ್ಪುರ ವಿಭಾಗದ ನಾಯಕರೊಬ್ಬರು "ಜೋಶಿ ಪಾದಕ್ಕೆರಗಿದಾಗ ನಮ್ಮಲ್ಲಿ ಅನೇಕರಿಗೆ ಆಶ್ಚರ್ಯವಾಯಿತು. ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಇದು ತುಂಬ ಅಪರೂಪದ ದೃಶ್ಯ. ಇದು ಎಲ್ಲರನ್ನೂ ಜೊತೆಗೆ ಸೇರಿಸಿಕೊಂಡು ಹೋಗುವ ಮೋದಿಯಂತಹ ನಾಯಕ ಪಕ್ಷದಲ್ಲಿ ಮತ್ತೊಬ್ಬರಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ.

ಕಾನ್ಪುರದಿಂದ ಕಣಕ್ಕಿಳಿದಿರುವ ಜೋಶಿ ಇತ್ತೀಚಿಗೆ, ದೇಶದಲ್ಲಿ ಮೋದಿ ಅಲೆ ಇಲ್ಲ. ಗುಜರಾತಿನ ಅಭಿವೃದ್ಧಿ ಮಾದರಿಯನ್ನು ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ವಿವಾದವನ್ನು ಎಳೆದುಕೊಂಡಿದ್ದರು.

ಅವರ ಹೇಳಿಕೆಗೆ ಅವಮಾನಿಸುವಂತೆ, ಪಕ್ಷದ ಕಾರ್ಯಕರ್ತರು ಜೋಶಿಯ ಅಭಿಯಾನದಲ್ಲಿ ನಿರಂತರವಾಗಿ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ