ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ಶನಿವಾರ, 19 ಏಪ್ರಿಲ್ 2014 (16:24 IST)
ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ಹಾಗೆ ವಿವಾದ ಸೃಷ್ಟಿಸುವ ಹೇಳಿಕೆ ನೀಡಿದ್ದ ಅಮಿತ್ ಶಾ ಅವರ ಮೇಲಿನ ನಿಷೇಧವನ್ನು ಆಯೋಗ ಯಾಕೆ ಹಿಂತೆಗೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.
PTI

ಶಾ ಮೇಲಿನ ನಿಷೇಧವನ್ನು ತೆರವುಗೊಳಿಸಿ, ತನ್ನ ಮೇಲೆ ಕೈಗೊಂಡಿರುವ ಕ್ರಮವನ್ನು ಹಾಗೆಯೇ ಉಳಿಸಿರುವ ಆಯೋಗದ ವಿರುದ್ಧ ಕಿಡಿಕಾರಿರುವ ಖಾನ್, ತನ್ನ ಮೇಲಿನ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಗುಡುಗಿದ್ದಾರೆ.

ಶಾ ಕುರಿತ ಆಯೋಗದ ನಿರ್ಧಾರ "ದುರದೃಷ್ಟಕರ" ಎಂದಿರುವ ಸಮಾಜವಾದಿ ಪಕ್ಷ, ಖಾನ್‌ಗೆ "ಅನ್ಯಾಯ" ಮಾಡಲಾಗಿದೆ ಎಂದು ಆರೋಪಿಸಿದೆ.

ಖಾನ್ ವಿರುದ್ಧದ ಆಯೋಗದ ಕ್ರಮ "ಅಘೋಷಿತ ತುರ್ತುಪರಿಸ್ಥಿತಿ" ಛಾಯೆಯನ್ನು ಒಳಗೊಂಡಿದೆ ಎಂದು ಆರೋಪಿಸಿರುವ ಎಸ್ಪಿ, ಪಕ್ಷದ ಪ್ರಮುಖ ಮುಸ್ಲಿಂ ಮುಖವಾಗಿರುವ ಖಾನ್ ಯಾವ ತಪ್ಪನ್ನು ಮಾಡಿಲ್ಲ , ಅವರು ಕ್ಷಮೆ ಕೇಳುವ ಅಗತ್ಯ ಕಾಣುತ್ತಿಲ್ಲ" ಎಂದು ಹೇಳಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಖಾನ್, "ನಾನು ಯಾವ ಅಪರಾಧವನ್ನು ಮಾಡಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.

ಯಾವುದಾದರೂ ಆಯೋಗ ಸುಪ್ರೀಂ ಕೋರ್ಟ್‌ಗಿಂತ ಎತ್ತರದಲ್ಲಿರಲು ಸಾಧ್ಯವೇ ಎಂದು ಪ್ರಶ್ನಿಸಿರುವ ಖಾನ್, ಚುನಾವಣಾ ಆಯೋಗ ತನ್ನ ನಿರಂಕುಶ ಅಧಿಕಾರಕ್ಕೆ ಯಾವ ಕೋರ್ಟ್ ಕೂಡ ಸವಾಲೆಸೆಯಲು ಸಾಧ್ಯವಿಲ್ಲ ಎಂಬ ತಪ್ಪು ತಿಳುವಳಿಕೆಯನ್ನು ಹೊಂದಿದೆ ಎಂದು ಟೀಕಿಸಿದರು.

ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ನಾಯಕ ಖಾನ್ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಆಯೋಗ ಪ್ರಚಾರ ನಡೆಯದಂತೆ ಎಪ್ರೀಲ್ 11ರಂದು ನಿಷೇಧ ಹೇರಿತ್ತು. ಆದರೆ ತಾನು ಇನ್ನು ಸಮಾಜದ ಶಾಂತಿ ಭಂಗ ಮಾಡುವಂತ ಭಾಷಣವನ್ನು ಮಾಡಲಾರೆ ಎಂದು ಶಾ ಒಪ್ಪಿಕೊಂಡಿದ್ದರಿಂದ ನಿನ್ನೆ ಅವರ ಮೇಲಿನ ನಿಷೇಧವನ್ನು ಆಯೋಗ ರದ್ದು ಪಡಿಸಿತ್ತು.

ವೆಬ್ದುನಿಯಾವನ್ನು ಓದಿ