ನಿರೆಲ್ : ಗಲ್ಫ್ ರಾಷ್ಟ್ರಗಳ ಪ್ರಥಮ ತುಳು ಚಲನಚಿತ್ರ

WD
ಕಲಾವಿದ ಶೋಧನ್ ಪ್ರಸಾದ್ ರವರು ನಿರ್ಮಿಸುತ್ತಿರುವ ಗಲ್ಫ್ ರಾಷ್ಟ್ರಗಳಲ್ಲಿ ಸಂಪೂರ್ಣವಾಗಿ ಚಿತ್ರೀಕರಣಗೊಳ್ಳಲಿರುವ ಪ್ರಥಮ ತುಳು ಚಿತ್ರ ಎಂಬ ಹೆಗ್ಗಳಿಕೆಯ ‘ನಿರೆಲ್’ಗೆ ಉದ್ಯಮಿ ಸರ್ವೋತ್ತಮ ಶೆಟ್ಟಿ ಚಾಲನೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ತುಳು ಚಿತ್ರಗಳು ತೆರೆ ಕಾಣುತ್ತಿದ್ದು, ತುಳು ಚಲನಚಿತ್ರ ನಿರ್ಮಾಣಕ್ಕೆ ಹೆಚ್ಚುಹೆಚ್ಚು ಕಲಾವಿದರು ಹಾಗು ಉದ್ಯಮಿಗಳು ಆಸಕ್ತಿ ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಒಂದು ಹೆಜ್ಜೆ ಮುಂದುವರಿದು, ತುಳುವರು ದುಬೈಯಲ್ಲೂ ಚಿತ್ರ ನಿರ್ಮಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ. ಇದರಿಂದ ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ತುಳುವರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಅವಕಾಶ ದೊರಕಲಿದೆ. ಅಧಿಕ ಸಂಖ್ಯೆಯಲ್ಲಿ ತುಳುವರು ನಿರೆಲ್ ವೀಕ್ಷಿಸಿ ಪ್ರೋತ್ಸಾಹಿಸಲಿ " ಎಂದು ಸರ್ವೋತ್ತಮ ಶೆಟ್ಟಿಮ ಚಿತ್ರತಂಡಕ್ಕೆ ಶುಭ ಹಾರೈಸಿದರು.

WD
ನಿರಲ್ ಚಿತ್ರ ನಿರ್ಮಾಪಕ ಶೋಧನ್ ಪ್ರಸಾದ್ ಮಾತನಾಡಿ " ನಿರ್ದೇಶಕರ ಹಾಗು ಕಲಾವಿದರ ಸ್ಫೂರ್ತಿ ನೋಡಿದರೆ ಇದೊಂದು ಕಲಾಪ್ರತಿಭಾ ಸಂಗಮವಾಗಿ, ಅತ್ಯುತ್ತಮ ಚಲನಚಿತ್ರವಾಗಿ ಮೂಡಿ ಬರುವುದರಲ್ಲಿ ಸಂಶಯವಿಲ್ಲ" ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರಕಥೆಯ ಫೈಲನ್ನು ಚಿತ್ರದ ನಿರ್ದೇಶಕ ರಂಜಿತ್ ಬಜಪೆ ಅವರಿಗೆ ಹಸ್ತಾಂತರಿಸಲಾಯಿತು. ಇದೇ ಮುಂಬರುವ ಏಪ್ರಿಲ್ ತಿಂಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಹಾಗು ಮುಂಬಯಿ ಮತ್ತು ದುಬೈ ಸೇರಿದಂತೆ ವಿವಿಧಡೆಗಳಲ್ಲಿ ಚಿತ್ರಮಂದಿರಗಳಲ್ಲಿ ನಿರೆಲ್ ಚಿತ್ರ ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

WD
ಕಲಾವಿದ ಶೋಧನ್ ಪ್ರಸಾದ್ ಅವರು ‘ಸಂಧ್ಯಾ ಕ್ರಿಯೇಶನ್’ ಹೆಸರಲ್ಲಿ ‘ನಿರೆಲ್’ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕ, ಅನೂಪ್, ನಾಯಕಿಯರಾದ ವರುಣ ಶೆಟ್ಟಿ , ದೀಪ್ತಿ ಸಾಲಿಯಾನ್, ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಂತೋಷ್ ಕರ್ಕೇರ, ಕಲಾ ನಿರ್ದೇಶಕ ರಜನೀಶ್ ಅಮೀನ್, ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಸಚಿನ್ ಪಡೀಲ್ ಉಪಸ್ಥಿತರಿದ್ದರು.

ಚಿತ್ರಕ್ಕೆ ಮಣಿ ಕೋಕಲ್ ನಾಯರ್ ಇವರು ಛಾಯಾಗ್ರಹಣ ಮಾಡಲಿದ್ದು, ಅಶ್ವಥ್ ಸಾಮ್ಯೂಲ್ ಸಂಕಲನ ಮಾಡಲಿದ್ದಾರೆ. ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಬೆಂಗಳೂರಿನ ಸಾಫ್ಟವೇರ್ ಎಂಜಿನಿಯರ್ ಅಭಿಷೇಕ್ ಎಸ್. ಎನ್. ಮಾಡಲಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಕಾರ್ತಿಕ್ ಗೌಡ ಬರೆದಿದ್ದಾರೆ. ಚಿತ್ರದ ಹಾಡುಗಳನ್ನು, ಅಭಿಷೇಕ್ ಎಸ್. ಎನ್., ಅಕ್ಷತ ರಾವ್, ಪ್ರಮೋದ್ ಕುಮಾರ್, ಶಿವಕುಮಾರ್ ಮತ್ತು ವೀರ ರೊಡ್ರಿಗಸ್ ಹಾಡಲಿದ್ದಾರೆ. ಹುಟ್ಟೂರಿಂದ ಸಾವಿರಾರು ಮೈಲುಗಳ ದೂರದ ಮರಳೂ ಗಾಡಿನಲ್ಲಿದ್ದು, ಪ್ರಪ್ರಥಮಬಾರಿಗೆ ಸಂಪೂರ್ಣವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರೀಕರಣಗೊಳ್ಳಲಿರುವ ತುಳು ಚಿತ್ರವೊಂದರ ನಿರ್ಮಾಣದಂತಹ ಸಾಹಸಮಯ ಕಾರ್ಯಕ್ಕೆ ಕೈಹಾಕಿದ ಕಲಾವಿದ ಶೋಧನ್ ಪ್ರಸಾದ್ ರವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ವೆಬ್ ದುನಿಯಾ ಅಭಿನಂದನೆಗಳು.

ವೆಬ್ದುನಿಯಾವನ್ನು ಓದಿ