ವಿದ್ಯುತ್ ಸಮಸ್ಯೆಗೆ ಕೇಂದ್ರವೇ ಹೊಣೆ: ಶೋಭಾ ಮತ್ತೆ ಗುಡುಗು

ಬುಧವಾರ, 5 ಅಕ್ಟೋಬರ್ 2011 (15:32 IST)
ರಾಜ್ಯ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಕೇಂದ್ರ ಸರಕಾರವೇ ಸಂಪೂರ್ಣ ಹೊಣೆಯಾಗಿದ್ದು, ಮಲತಾಯಿ ಧೋರಣೆ ತಾಳಿದ್ದಾರೆ ಎಂದು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ತೀವ್ರ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂದರು.

ವಿದ್ಯುತ್ ಸಮಸ್ಯೆ ನೀಗಿಸಲು ಹೊರ ರಾಜ್ಯಗಳಿಂದ ಇಂಧನ ಖರೀದಿ ಮಾಡಲಾಗುತ್ತಿದೆ. ಖರೀದಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾರಿಗಾದರೂ ಅನುಮಾನಗಳಿದ್ದರೆ ದಾಖಲೆಗಳನ್ನು ಪರಿಶೀಲಿಸಬಹುದು ಎಂದರು.

ಕೇಂದ್ರದ ಸರಕಾರದಿಂದ ರಾಜ್ಯದ ಪಾಲು 1734 ಮೆಗಾವ್ಯಾಟ್ ಬರಬೇಕು. ಆದರೆ ಈಗ ಒಂದು ಸಾವಿರ ಮೆಗಾ ವ್ಯಾಟ್ ಮಾತ್ರ ದೊರಕುತ್ತಿದೆ. ಅದರಲ್ಲೂ ತಾರತಮ್ಯ ಆಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಬೇರೆ ರೀತಿಯಲ್ಲಿ ಕಲ್ಲಿದ್ದಲು ಪೂರೈಸಲು ಮನವಿ ಮಾಡಲಾಗಿದೆ. ಆದರೆ ಕೇಂದ್ರದಿಂದ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದರು.

ರೈಲ್ವೇ ಖಾತೆ ರಾಜ್ಯ ಸಚಿವ ಮುನಿಯಪ್ಪ ಬತೆ ಮಾತುಕತೆ ನಡೆಸಲಾಗಿದೆ. ವಿದ್ಯುತ್ ಸಮಸ್ಯೆ ಕೆಲವು ದಿನಗಳೊಳಗೆ ಬಗೆಹರಿಯುವ ವಿಶ್ವಾಸವಿದೆ ಎಂದರು.

ಕೇಂದ್ರದ ಯುಪಿಎ ಸರಕಾರ ಬಿಜೆಪಿ ಸರಕಾರಗಳಿಗೆ ಒಂದು ನೀತಿ, ಕಾಂಗ್ರೆಸ್ ಸರಕಾರಗಳಿಗೆ ಒಂದು ನೀತಿ ಅನುಸರಿಸುತ್ತಿದೆ. ಆ ಮೂಲಕ ಬಿಜೆಪಿ ಸರಕಾರಗಳಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬೇಕೆಂದೇ ಸರಕಾರ ಕೃತಕ ಅಭಾವ ಮಾಡುತ್ತಿದೆ ಎಂಬ ಜೆಡಿಎಸ್ ಹಿರಿಯ ನಾಯಕ ಎಚ್. ಡಿ. ರೇವಣ್ಣ ಮಾಡಿರುವ ಟೀಕೆಗೆ ಪ್ರತಿಯಾಗಿ, ಅದು ಅವರ ಘನತೆಗೆ ಶೋಭೆ ತರುವಂತದ್ದಲ್ಲ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ