ಜೈಲಿನ ವಾಸ ತಪ್ಪಿಸಲು ಯಡ್ಡಿ ಅನಾರೋಗ್ಯ ತಂತ್ರ: ಸಿದ್ದು

ಭಾನುವಾರ, 16 ಅಕ್ಟೋಬರ್ 2011 (16:14 IST)
PR
ಮಾಜಿ ಮುಖ್ಯಮಂತ್ರಿ ಭೂ ಹಗರಣದ ಆರೋಪಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಸಂಜೆವರೆಗೆ ಆರೋಗ್ಯವಾಗಿದ್ದರು. ಜೈಲಿನಲ್ಲಿ ಕೂಡಾ ಆರೋಗ್ಯ ತಪಾಸಣೆ ನಡೆಸಿದಾಗ ಯಾವುದೇ ನೋವಿರಲಿಲ್ಲ. ಇದ್ದಕ್ಕಿದ್ದಂತೆ ಅನಾರೋಗ್ಯದ ನೆಪವೊಡ್ಡಿ ಜಯದೇವ್ ಆಸ್ಪತ್ರೆಗೆ ದಾಖಲಾಗಿರುವುದು ನೋಡಿದಲ್ಲಿ ಅವರ ಹೈಡ್ರಾಮಾ ಇನ್ನು ಮುಕ್ತಾಯಗೊಂಡಂತೆ ಕಾಣುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಜೈಲುವಾಸದಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ತಂತ್ರ ಹೂಡಿ, ಜಯದೇವ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಡಿಯೂರಪ್ಪ ಇದೀಗ ಸಕ್ಕರೆ ರೋಗ, ರಕ್ತದೊತ್ತಡ, ಎದೆನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಮೇಲೆ ಒತ್ತಡ ಹೇರಿ ಹೇಳಿಕೆ ನೀಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸದಾನಂದಗೌಡರು, ಆರೋಪಿ ಯಡಿಯೂರಪ್ಪ ಪರ ಬೆಂಬಲಕ್ಕೆ ನಿಂತು, ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡದೆ ಆರೋಪಿಯ ಹಿಂದೆ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ್ದರಿಂದ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸದಾನಂದ ಗೌಡರ ಸಂಪುಟದಲ್ಲಿ ಅರ್ದದಷ್ಟು ಸಚಿವರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ ಸರಕಾರವನ್ನು ಮುನ್ನಡೆಸುವ ನೈತಿಕತೆ ಮುಖ್ಯಮಂತ್ರಿಗಳಿಗಿಲ್ಲ ಎಂದು ಕಿಡಿಕಾರಿದರು.

ರಾಜಭವನದಲ್ಲಿಂದು ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಂಧನ ಕುರಿತಂತೆ ನಾವು ಸಂಭ್ರಮಿಸಿಲ್ಲ. ಆದರೆ, ರಾಜಕಾರಣಿಗಳಿಗೆ ಇದೊಂದು ತಕ್ಕ ಪಾಠವಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ