ವಿಧಾನಸಭೆ ವಿಸರ್ಜನೆಗೆ ಆಡ್ವಾಣಿ ಸಲಹೆ ನೀಡಲಿ: ಸಿದ್ದು ವ್ಯಂಗ್ಯ

ಗುರುವಾರ, 27 ಅಕ್ಟೋಬರ್ 2011 (15:56 IST)
PR
ಜನ ಚೇತನಾ ಯಾತ್ರೆಯ ಅಂಗವಾಗಿ ಮಾಸಾಂತ್ಯಕ್ಕೆ ಬೆಂಗಳೂರಿಗೆ ಆಗಮಿಸುತ್ತಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ರಾಜ್ಯದಲ್ಲಿ ಬಿಜೆಪಿ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಗಮನಹರಿಸಿ ವಿಧಾನಸಭೆ ವಿಸರ್ಜನೆಗೆ ಸಲಹೆ ನೀಡಲಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಭಾರಿ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ, ಬಿಜೆಪಿ ಹಿರಿಯ ನಾಯಕ ಆಡ್ವಾಣಿ ರಾಜ್ಯದಲ್ಲಿ ರಥಯಾತ್ರೆ ನಡೆಸಬಾರದಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕೂಡಾ ಆಡ್ವಾಣಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲುವಾಸಿಯಾಗಿದ್ದು, ಇತರ ಐವರು ಸಚಿವರು ಕೂಡಾ ಜೈಲಿನ ಅತಿಥಿಗಳಾಗಲಿರುವ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವನ್ನು ವಿಸರ್ಜಿಸಿ ಹೊಸತಾಗಿ ಜನಾದೇಶ ಪಡೆಯುವಂತೆ ಸಲಹೆ ನೀಡಬೇಕು ಎಂದು ಟೀಕಿಸಿದರು.

ಭೂ ಹಗರಣಗಳಿಂದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿರುವುದರಿಂದ ಪಕ್ಷಕ್ಕೆ ಯಾವುದೇ ಹಾನಿಯಿಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳಿಕೆ ನೀಡಿರುವುದು ನಾಚಿಕೆಗೇಡಿತನದ ಸಂಗತಿ. ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ಕಿಡಿಕಾರಿದರು.

ಜನತೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯುವಂತೆ ವಿರೋಧಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ ಮುಖ್ಯಮಂತ್ರಿ,ಸದಾನಂದರ ನಿರ್ಲಕ್ಷ್ಯ ಧೋರಣೆಯ ಪರಮಾವಧಿಯಾಗಿದೆ ಎಂದು ಟೀಕಿಸಿದರು.

ಒಂದು ವರ್ಷದ ಅವಧಿಯಲ್ಲಿ 60 ದಿನಗಳ ಕಾಲ ಅಧಿವೇಶನ ಕರೆಯಬೇಕು ಎನ್ನುವ ಶಾಸನವಿದೆ. ಆದರೆ, ಪ್ರಸಕ್ತ ವರ್ಷದ ಅವಧಿಯಲ್ಲಿ ಕೇವಲ 22 ದಿನಗಳ ಕಾಲ ಅಧಿವೇಶನ ನಡೆದಿದೆ ಎಂದು ತಿಳಿಸಿದ್ದಾರೆ.

ಲೋಕಾಯುಕ್ತ ಪೊಲೀಸರು ಗೃಹ ಸಚಿವ ಆರ್. ಅಶೋಕ್ ವಿರುದ್ಧ ತನಿಖೆಗೆ ಆದೇಶಿಸಿರುವುದರಿಂದ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ