ಗಿರೀಶ್‌ ಮಟ್ಟೆಣನವರ್‌ ಚಿಕ್ಕಮ್ಮ ಮಗು ಕಳ್ಳಿ; ಪೊಲೀಸ್ ವಶಕ್ಕೆ

ಶನಿವಾರ, 5 ನವೆಂಬರ್ 2011 (20:27 IST)
ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮಗುವನ್ನು ಕಳವು ಮಾಡಿದ ಮಹಿಳೆಯನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾವೇರಿ ಜಿಲ್ಲೆಯ ಹಿರೇಲಿಂಗದಹಳ್ಳಿ ಲಕ್ಷ್ಮಿ ಸಹದೇವಪ್ಪ ಹಲಗೇರಿ ಅವರು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅಕ್ಟೋಬರ್ 31ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂದು ರಾತ್ರಿಯೇ ಅಪರಿಚಿತ ಮಹಿಳೆಯೊಬ್ಬಳು ಆಕೆಯೊಂದಿಗೆ ಪರಿಚಯ ಮಾಡಿಕೊಂಡಿದ್ದು, ನವೆಂಬರ್ 2ರಂದು ಮಗುವಿಗೆ ಪೋಲಿಯೊ ಹನಿ ಹಾಕಿಸುವುದಾಗಿ ಹೇಳಿ ತೆಗೆದುಕೊಂಡು ನಾಪತ್ತೆಯಾಗಿದ್ದಳು.

ಮಗು ತೆಗೆದುಕೊಂಡು ಹೋದ ಮಹಿಳೆ ನಾಪತ್ತೆಯಾಗಿದ್ದರಿಂದ ಆಘಾತಗೊಂಡಿದ್ದ ಮಗುವಿನ ತಾಯಿ ಲಕ್ಷ್ಮಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಇದರಿಂದ ಕೆರಳಿದ ಸಾರ್ವಜನಿಕರು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಆಸ್ಪತ್ರೆಯ ಔಟ್‌ ಪೊಲೀಸ್‌ ಠಾಣೆಯಲ್ಲಿ ಮಗುವಿನ ತಂದೆ ಸಹದೇವಪ್ಪ ಹಲಗೇರಿ ಪ್ರಕರಣ ದಾಖಲಿಸಿದ್ದರು. ಮಗು ಕಳವಿನ ಕುರಿತು ತನಿಖೆ ಆರಂಭಿಸಿದ ಪೊಲೀಸರು ಕಳವು ಮಾಡಿದ್ದ ಮಹಿಳೆಯ ಕಾಲ್ಪನಿಕ ರೇಖಾ ಚಿತ್ರವನ್ನು ರಚಿಸಿ ತಪಾಸಣೆ ನಡೆಸಿದಾಗ ಮಗುವಿನ ಕಳ್ಳಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.


ಗಂಡು ಮಗುವಿನ ವ್ಯಾಮೋಹದಿಂದ ಮಗು ಕಳವು
ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಕಳವಾಗಿರುವ ಮಗು ಧಾರವಾಡದಲ್ಲಿ ಪತ್ತೆಯಾಗಿದೆ.

ಧಾರವಾಡ ವಿವಿಯಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ ಪ್ರೇಮವ್ವ ಮಟ್ಟೆಣ್ಣನವರ್ (ಬಿಜೆಪಿ ಮುಖಂಡ ಗಿರೀಶ್‌ ಮಟ್ಟೆಣನವರ್‌ ಚಿಕ್ಕಮ್ಮ) ಗಂಡುಮಗುವಿನ ವ್ಯಾಮೋಹದಿಂದಾಗಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಮಗು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟು ಯಾರಿಗೆ ಗಂಡುಮಗು ಜನಿಸುತ್ತದೆ ಎಂದು ನಿಗಾವಹಿಸಿದ್ದು, ಮಗುವಿನ ತಾಯಿಗೆ ಸುಳ್ಳು ಹೇಳಿ ನಂಬಿಸಿ ಮಗುವನ್ನು ಹೊತ್ತೊಯ್ದಿದ್ದಾಗಿ ತಿಳಿಸಿದ್ದಾಳೆ. ಪ್ರೇಮವ್ವ ಮಟ್ಟೆಣ್ಣನವರ್‌ ಹಾಗೂ ಆಕೆಯ ಪತಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.





ವೆಬ್ದುನಿಯಾವನ್ನು ಓದಿ