ಬಳ್ಳಾರಿ: ಬಿಜೆಪಿ ತಂತ್ರ- ಕಡೇ ಕ್ಷಣದಲ್ಲಿ ಅಭ್ಯರ್ಥಿ ಬದಲು

ಶುಕ್ರವಾರ, 11 ನವೆಂಬರ್ 2011 (10:24 IST)
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಶ್ರೀರಾಮುಲು ಸ್ವತಂತ್ರವಾಗಿ ಸ್ಫರ್ಧಿಸಿರುವ ಹಿನ್ನೆಲೆಯಲ್ಲಿ ಪ್ರತಿ ತಂತ್ರ ರೂಪಿಸುತ್ತಿರುವ ಬಿಜೆಪಿ ಕಡೇ ಕ್ಷಣದಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿದೆ.

ರೆಡ್ಡಿ ಬ್ರದರ್ಸ್‌ ಬಳ್ಳಾರಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಸಂದರ್ಭದಲ್ಲಿ ಮೂಲೆ ಗುಂಪಾಗಿದ್ದ ಬಿಜೆಪಿ ಮುಖಂಡರನ್ನೇ ಬಳಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ತಂತ್ರ ರೂಪಿಸಿದೆ. ಕಡೇ ಕ್ಷಣದಲ್ಲಿ ಬಳ್ಳಾರಿಯ ಬಿಜೆಪಿ ಮುಖಂಡ ಗಾದಿ ಲಿಂಗಪ್ಪ ಅವರನ್ನು ಕಣಕ್ಕಿಳಿಸಿದ್ದು, ಅವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಬಿಜೆಪಿಯ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಬಳ್ಳಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ತೀವ್ರ ಕಸರತ್ತು ನಡೆಸಿದ್ದ ಬಿಜೆಪಿ ಮುಖಂಡರು ಪಕ್ಷದ ರಾಷ್ಟ್ರೀಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಹಾಗೂ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಅಶೋಕ್‌ ಅವರಿಗೆ ಬಿ ಫಾರಂ ರಹಿತವಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದ್ದರು. ಈ ವಿದ್ಯಮಾನವು ಸ್ಥಳೀಯ ಬಿಜೆಪಿ ಮುಖಂಡರನ್ನು ಕೆರಳಿಸಿತ್ತು. ಈ ಕುರಿತು ಗಂಭೀರವಾಗಿ ಆಲೋಚಿಸಿದ ಪಕ್ಷದ ಮುಖಂಡರು ಸ್ಥಳೀಯ ಮುಖಂಡರನ್ನೇ ಕಣಕ್ಕಿಳಿಸಲು ಅಂತಿಮವಾಗಿ ನಿರ್ಧರಿಸಿದ್ದಾರೆ.

ಶ್ರೀರಾಮುಲು ಜೊತೆ ಸಂಧಾನ ವಿಫಲ
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಶ್ರೀರಾಮುಲು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಸರಕಾರಕ್ಕೆ ಉಂಟಾಗುವ ಸಂಕಷ್ಟವನ್ನು ತಪ್ಪಿಸಲು ಬಿಜೆಪಿ ಮುಖಂಡರು ಶ್ರೀರಾಮುಲು ಅವರನ್ನು ಗುರುವಾರ ರಾತ್ರಿ ಬೆಂಗಳೂರಿಗೆ ಕರೆಸಿಕೊಂಡು ನಡೆಸಿದ ಸಂಧಾನ ವಿಫಲವಾಗಿದೆ. ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಶ್ರೀರಾಮುಲು ವಿಧಿಸಿದ ಷರತ್ತುಗಳಿಗೆ ಬಿಜೆಪಿ ಮುಖಂಡರು ಒಪ್ಪಲಿಲ್ಲ. ಆದರೆ ಅವರ ಕೋರಿಕೆಯ ಮೇರೆಗೆ ಚುನಾವಣೆ ಮುಗಿದ ಬಳಿಕ ಬಳ್ಳಾರಿಯ ಆಯಕಟ್ಟಿನ ಅಧಿಕಾರಿಗಳ ವರ್ಗಾವಣೆಗೆ ಬಿಜೆಪಿ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ