ಅದೃಷ್ಟ ದಿನ: ಕೊಡಗಿನ ಅಯ್ಯಮ್ಮಗೆ 105ನೇ ಹುಟ್ಟುಹಬ್ಬ!

ಶನಿವಾರ, 12 ನವೆಂಬರ್ 2011 (16:04 IST)
PR
ನೂರು ವರ್ಷಕ್ಕೊಮ್ಮೆ ಮಾತ್ರ ಬರುವ 11-11-11 ದಿನಾಂಕಕ್ಕೆ ಅದ್ಯಾಕೋ ಗೊತ್ತಿಲ್ಲ ಜನ ಮಾತ್ರ ಎಲ್ಲಿಲ್ಲದ ಮಹತ್ವವನ್ನು ನೀಡಿದ್ದಾರೆ. ಮತ್ತೊಂದೆಡೆ ಸಂಖ್ಯಾ ತಜ್ಞರು ಕೂಡ ಈ ದಿನಾಂಕವನ್ನು ಮಹತ್ವಪೂರ್ಣ ಎಂಬಂತೆ ಬಿಂಬಿಸಿದ್ದರು.

ಆದರೆ ಇದೇ ಸಂದರ್ಭ ಶತಾಯುಷಿಯಾದ ಕೊಡಗಿನ ಪೊನ್ನಂಪೇಟೆಯ ಮರಡ ಡಿ.ಅಯ್ಯಮ್ಮ ಅವರು ತಮ್ಮ 105ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಎಂದರೆ ಅಚ್ಚರಿಯಾಗಬಹುದು. ಪೊನ್ನಂಪೇಟೆಯ ಕುಂದಾ ರಸ್ತೆಯ ಅಯ್ಯಪ್ಪ ದೇವಸ್ಥಾನ ಮುಂದಿರುವ ಪುತ್ರ ನಾಚಪ್ಪ(ನಂಜಪ್ಪ)ರವರ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು.

1907ರ ನವೆಂಬರ್ 11ರಂದು ಜನಿಸಿದ ಅಯ್ಯಮ್ಮರವರು ಮೂಲತಃ ಹರಿಹರ ಗ್ರಾಮದವರು, ಇದೀಗ ಪುತ್ರ ನಾಚಪ್ಪನವರ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರು ಅವಿದ್ಯಾವಂತರಾದರೂ ಬಲ್ಯಮಂಡೂರುವಿನಲ್ಲಿ ಅಂಗಡಿ ನಡೆಸುತ್ತಾ ಜೀವನ ಸಾಗಿಸಿ, ತಮ್ಮ ಏಕೈಕ ಪುತ್ರನಾದ ನಾಚಪ್ಪರವರನ್ನು ಶಿಕ್ಷಕರಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ನನ್ನ ದೈಹಿಕ ಕ್ಷಮತೆಗೆ ಸಸ್ಯಹಾರಿ ಸೇವನೆಯೇ ಕಾರಣವಾಗಿದ್ದು, ಎಲ್ಲೊ ಒಂದೊಂದು ಬಾರಿ ಮೊಟ್ಟೆ ತಿನ್ನುತ್ತೇನೆ ಅಷ್ಟೆ ಎನ್ನುವ ಅವರು ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬಾಳಲು 'ವಿದ್ಯಾಭ್ಯಾಸ ಮುಖ್ಯ'ವಾಗಿದ್ದು ತಿನ್ನುವುದು ಮಿತಿಯಲ್ಲಿದ್ದರೆ ಉತ್ತಮ ಎಂಬುವುದು ಇವರ ಕಿವಿಮಾತು.

ಫೋಟೋ-ವರದಿ: ಬಿ.ಎಂ.ಲವಕುಮಾರ್, ಕಗ್ಗೌಡ್ಲು

ವೆಬ್ದುನಿಯಾವನ್ನು ಓದಿ