ಬಿಜೆಪಿಯಿಂದಲೂ ನನಗೆ ಮಾನಸಿಕ ಹಿಂಸೆ: ಬಿಎಸ್‌ವೈ

ಬುಧವಾರ, 16 ನವೆಂಬರ್ 2011 (11:06 IST)
PR
ಕಳೆದ ಮೂರು ವರ್ಷಗಳಲ್ಲಿ ನನಗೆ ನಿರಂತರವಾಗಿ ಮಾನಸಿಕೆ ಹಿಂಸೆ ನೀಡಿದರು. ಮುಜುಗರ ಸೃಷ್ಟಿಸಿದರು. ತಡೆಯಲು ಸಾಧ್ಯವಾಗದ ರೀತಿಯಲ್ಲಿ ವಿರೋಧ ಪಕ್ಷದವರ ಜೊತೆಗೆ ನನ್ನ ಪಕ್ಷದವರೆ ನೀಡಿದ ಹಿಂಸೆಯನ್ನು ಇದೇ ರೀತಿ ಮುಂದುವರಿಸಿದರೆ ರಾಜಕಾರಣ ಬಿಟ್ಟು ಬೇರೆ ಕ್ಷೇತ್ರದತ್ತ ಹೊರಳಬೇಕಾದ ಅನಿವಾರ್ಯತೆ ಎದುರಾಗಬಹುದು.ನಾನು ಬೇಕೋ ಅಥವಾ ಬೇಡವೋ ಎನ್ನುವುದನ್ನು ನಿರ್ಧರಿಸಿ ಮುಖಂಡರು ಒಂದು ನಿರ್ಧಾರಕ್ಕೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

ನಾನು ಕೂಡಾ ಕಾದು ನೋಡುತ್ತೇನೆ. ಪಕ್ಷದ ಮುಖಂಡರು ತಮ್ಮ ವರ್ತನೆ ತಿದ್ದಿಕೊಳ್ಳಬಹುದು. ಆದರೆ, ಒಂದು ಮಾತಂತೂ ಸ್ಪಷ್ಟ. ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಿಲ್ಲ ಅಥವಾ ಒಡೆಯುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದರು. ಈ ರೀತಿ ಯೋಚಿಸುತ್ತೇನೆ ಎಂದರೆ ನನ್ನ ಮನಸಿಗೆಷ್ಟು ಘಾಸಿಯಾಗಿರಬಹುದು ಎಂದು ಯಾರಾದರೂ ಅರ್ಥ ಮಾಡಿಕೊಳ್ಳಬಹುದು ಎಂದರು.

ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ವಿರೋಧ ಪಕ್ಷಗಳು ಟೀಕಿಸುವುದು ಮುಖ್ಯಮಂತ್ರಿಯೊಬ್ಬರ ವಿರುದ್ಧ ಸಂಚು ರೂಪಿಸಿ ಅಧಿಕಾರದಿಂದ ಕೆಳಗಿಳಿಸುವುದು ಸಾಮಾನ್ಯ ಸಂಗತಿ. ಆದರೆ, ಪಕ್ಷದ ಕೆಲವು ಮುಖಂಡರೇ ಇದರ ನೇತೃತ್ವವಹಿಸಿದ್ದು ನನಗೆ ಬೇಸರ ಮೂಡಿಸಿದೆ. ಜನಾಭಿಪ್ರಾಯ ಮನ್ನಿಸದೆ ನನ್ನ ವಿರುದ್ಧ ಷಢ್ಯಂತ್ರ ರೂಪಿಸಿದರು. ನಾನು ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದು, ಪಕ್ಷವನ್ನು ಬೆಳೆಸಿದ್ದು 1-110 ಸ್ಥಾನಗಳನ್ನು ತರುವಲ್ಲಿ ಶ್ರಮಿಸಿದ್ದು ಎಲ್ಲವೂ ಸುಳ್ಳೆ, ಹಾಗೆಂದು ಹೇಳಲಿ ನೋಡೋಣ ಎಂದರು.

ನಾನು ಮುಖ್ಯಮಂತ್ರಿಯಾಗಲು ಜನರ ಬೆಂಬಲ ಆಶೀರ್ವಾದ ಕಾರಣ, ಇದೇ ರೀತಿ ಜನತೆ ಬಯಸಿದಲ್ಲಿ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ. ಆದರೆ, ನಾನಾಗಿಯೇ ಯಾವುದೇ ಹುದ್ದೆಯನ್ನು ಬೇಡುವುದಿಲ್ಲ ಎಂದರು.

ಪಕ್ಷೇತರ ಅಭ್ಯರ್ಥಿ ಶ್ರೀ ರಾಮುಲು ಇಡೀ ಸರಕಾರವೇ ಬಂದರೂ ನನ್ನನ್ನು ಸೋಲಿಸಲಾಗುವುದಿಲ್ಲ ಎಂಬ ಮಾತನ್ನು ಆಡಿರುವುದು ದುರಹಂಕಾರದಿಂದ ಕೂಡಿದೆ.ಸರಕಾರದ ಸಾಧನೆಗಳನ್ನು ನೋಡಿ ಜನತೆ ಮತ ಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ