ಯಡಿಯೂರಪ್ಪ ಕೆಂಡಾಮಂಡಲ; ಬಳ್ಳಾರಿ ಗೂಂಡಾಗಿರಿಗೆ ಬ್ರೇಕ್ ಹಾಕ್ಬೇಕು

ಬುಧವಾರ, 23 ನವೆಂಬರ್ 2011 (10:05 IST)
PR
ಬಳ್ಳಾರಿಯಲ್ಲಿ ಇಷ್ಟು ದಿನ ಗೂಂಡಾಗಿರಿ ಇತ್ತು. ನಾವು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದು ತಪ್ಪಾಯ್ತು. ಶ್ರೀರಾಮುಲು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಳ್ಳಾರಿ ಬಿಜೆಪಿ ಅಂದ್ರೆ ಶ್ರೀರಾಮುಲು, ರೆಡ್ಡಿ ಸಹೋದರರು ಅಲ್ಲ. ಬಿಜೆಪಿ ಸರ್ಕಾರ ಉರುಳಿಸುತ್ತೇವೆ ಎಂಬುದು ಹಗಲುಗನಸಿನ ಮಾತು...ಹೀಗೆ ಕಾಂಗ್ರೆಸ್ ಮುಖಂಡರು, ಸಂತೋಷ್ ಹೆಗ್ಡೆ ವಿರುದ್ಧ ಕೆಂಡಾಮಂಡಲರಾದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ನಗರದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿಯ ಶಾಸಕರು ನಮ್ಮ ಜತೆಗಿದ್ದಾರೆ. ಶ್ರೀರಾಮುಲು ಜತೆ ಯಾವ ಶಾಸಕರೂ ಇಲ್ಲ.

ಶ್ರೀರಾಮುಲು ತಮ್ಮ ನಡವಳಿಕೆ ತಿದ್ದಿಕೊಳ್ಳಲಿ. ಅಹಂ ನಡವಳಿಕೆ ಬೇಡ. ಸರ್ವಾಧಿಕಾರಿಯಾಗಿ ಮೆರೆಯುತ್ತಿರೋ ಶ್ರೀರಾಮುಲುಗೆ ತಕ್ಕ ಪಾಠ ಕಲಿಸುತ್ತೇನೆ. ಮೆರವಣಿಗೆ ವೇಳೆ ಬೆಂಬಲಿಗರ ಮೂಲಕ ಗೂಂಡಾಗಿರಿ ನಡೆಸುತ್ತಾರೆ. ಇದಕ್ಕೆಲ್ಲ ಈ ಯಡಿಯೂರಪ್ಪ ಹೆದರಲ್ಲ ಎಂದು ಗುಡುಗಿದರು. ತಮ್ಮ ಮಾತಿನುದ್ದಕ್ಕೂ ಶ್ರೀರಾಮುಲು, ರೆಡ್ಡಿ ಬ್ರದರ್ಸ್, ಕಾಂಗ್ರೆಸ್ ಮುಖಂಡರಾದ ಪರಮೇಶ್ವರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಬಳ್ಳಾರಿ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗಾದಿ ಲಿಂಗಪ್ಪ ಬಹು ಅಂತರದಿಂದ ಗೆಲುವು ಸಾಧಿಸುತ್ತಾರೆ ಅದರಲ್ಲಿ ಸಂಶಯವೇ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸ್ವಾರ್ಥ ರಾಜಕಾರಣಿಗಳಿಗೆ ಮತದಾರರು ಬುದ್ಧಿ ಕಲಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ನಮಗೆ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ, ಈ ಚುನಾವಣೆಯಲ್ಲಿ ಜನರೇ ತೀರ್ಮಾನ ಕೈಗೊಳ್ಳುತ್ತಾರೆ. ಹಾಗಾಗಿ ಗೂಂಡಾಗಿರಿ, ಹಣದಿಂದ ಮತದಾರರನ್ನು ಖರೀದಿಸುವ ಅಭ್ಯರ್ಥಿಗಳಿಗೆ ಜನ ಪಾಠ ಕಲಿಸುತ್ತಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿ:
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದೇ ಕಾಂಗ್ರೆಸ್ ಪಕ್ಷ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ನಾನು ಅಕ್ರಮ ಗಣಿಗಾರಿಕೆ ತಡೆದ ದೇಶದ ಮೊದಲ ಮುಖ್ಯಮಂತ್ರಿ. ಆದ್ರೂ ನೀವೆಲ್ಲ ಸಂಚು ನಡೆಸಿ ನನ್ನ ಜೈಲಿಗೆ ಅಟ್ಟಿದಿರಿ. ರಾಜ್ಯದ ಹಣಕಾಸು ಪರಿಸ್ಥಿತಿ ಗೊತ್ತಿದೆಯಾ ಪರಮೇಶ್ವರ್ ಅವರೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಆಗ್ತಾ ಇದೆ, ಹಣಕಾಸು ಪರಿಸ್ಥಿತಿ ಉತ್ತಮವಿದೆ, ಕೋಮು ಸೌಹಾರ್ದತೆ ಇದೆ. ಇಷ್ಟೆಲ್ಲಾ ಇದ್ರೂ ಸಹ ನೀವು ಪಾಠ ಕಲಿತಿದ್ದೀರಾ ಅಂತ ತಿಳಿದುಕೊಂಡಿದ್ದೆ. ಇಲ್ಲ, ನೀವು ಪಾಠ ಕಲಿತಿಲ್ಲ. ಸೊಕ್ಕಿನಿಂದ ಮೆರೆಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುತ್ತೇನೆ ಎಂದು ಸವಾಲು ಹಾಕಿದರು.

ಸವಾರ್ಧಿಕಾರಿ ಶ್ರೀರಾಮುಲು, ಸೊಕ್ಕಿನಿಂದ ಮೆರೆಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಬೇಕು ಎಂದು ಬಹಿರಂಗವಾಗಿ ಕರೆ ನೀಡಿದರು. ಸರ್ಕಾರ ಬೀಳಿಸುತ್ತೇವೆ ಎಂಬ ನಿಮ್ಮ ಕನಸು ಯಾವತ್ತೂ ನನಸಾಗಲ್ಲ. ಇನ್ನೂ ಇಪ್ಪತ್ತು ವರ್ಷ ರಾಜಕಾರಣ ಮಾಡುತ್ತೇನೆ. ಕೋಲು ಊರಿಕೊಂಡಾದ್ರೂ ಸರಿ, ನಿಮ್ಮ ಅಡ್ರೆಸ್ ಇಲ್ಲದ ಹಾಗೆ ಮಾಡ್ತೇನೆ ಎಂದು ಗುಡುಗಿದರು.

ಅಲ್ಲದೇ ಈ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವಿರುದ್ಧವೂ ಕಿಡಿಕಾರಿದ ಅವರು, ಹೆಗ್ಡೆಯವರೇ ನಿಮ್ಮ ಬಗ್ಗೆ ಅಪಾರವಾದ ಗೌರವವಿದೆ. ಆದರೂ ಈಗಲಾದ್ರೂ ಫೋನ್ ಕದ್ದಾಲಿಕೆ ಬಗ್ಗೆ ರಾಜ್ಯದ ಜನತೆಗೆ ಸತ್ಯಾಂಶ ಬಿಚ್ಚಿಡಿ. ನನಗೆ ಯಾವುದೇ ನೋಟಿಸ್ ನೀಡದೆ, ವಿಚಾರಿಸದೆ ಜೈಲಿಗೆ ಹೋಗುವಂತೆ ಮಾಡಿ, ದೇಶದಲ್ಲಿ ತಲೆತಗ್ಗಿಸುವಂತೆ ಮಾಡಿದ್ದೀರಿ. ಈ ಬಗ್ಗೆ ನಾನು ಸದ್ಯದಲ್ಲೇ ಪುಸ್ತಕವೊಂದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದರು.

ವೆಬ್ದುನಿಯಾವನ್ನು ಓದಿ