ಹೆಗ್ಡೆ ವಿರುದ್ಧ ಆರೋಪ; ದೂರುದಾರ ವಿಶ್ವನಾಥ್‌ಗೆ 1 ಲಕ್ಷ ರೂ.ದಂಡ

ಮಂಗಳವಾರ, 29 ನವೆಂಬರ್ 2011 (20:40 IST)
PR
ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಸಂಸದ ಅನಂತ್ ಕುಮಾರ್, ಸಚಿವ ಆರ್.ಅಶೋಕ್ ಅವರು ಒಳಸಂಚು ನಡೆಸಿರುವುದಾಗಿ ಆರೋಪಿಸಿ ಈ ಷಡ್ಯಂತ್ರದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದ ವಕೀಲ ವಿಶ್ವನಾಥ್‌ಗೆ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಸಂತೋಷ್ ಹೆಗ್ಡೆ, ರಾಜ್ಯಪಾಲರು, ಸಂಸದ ಅನಂತ್ ಕುಮಾರ್, ಸಚಿವ ಅಶೋಕ್ ಒಳಸಂಚು ನಡೆಸಿರುವುದಾಗಿ ವಿಶ್ವನಾಥ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ತನಿಖೆಗೆ ಕೋರಿದ್ದ ಪಿಐಎಲ್ ಅನ್ನು ವಜಾಗೊಳಿಸಿದೆ. ಅಷ್ಟೇ ಅಲ್ಲ, ನಿಮ್ಮ ಅರ್ಜಿಯ ಯಾವುದೇ ರೀತಿಯಲ್ಲೂ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿಲ್ಲ. ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಹಾಗಾಗಿ ನ್ಯಾಯಾಲಯದ ಸಮಯವನ್ನು ಹಾಳು ಮಾಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ ಪೀಠ, ದೂರದಾರ ವಿಶ್ವನಾಥ್‌ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಪಿಐಎಲ್ ದಾಖಲಿಸುವಾಗ ಅದರ ಬಗ್ಗೆ ಅರಿವು ಇರಬೇಕು ಎಂದು ದೂರದಾರರಿಗೆ ಸೂಚಿಸಿರುವ ಪೀಠ, ಒಂದು ಲಕ್ಷ ರೂಪಾಯಿಯನ್ನು ನಾಲ್ಕು ವಾರದೊಳಗೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಪಾವತಿಸಬೇಕೆಂದು ನಿರ್ದೇಶನ ನೀಡಿದೆ.

ಸಂತೋಷ್ ಹೆಗ್ಡೆ, ರಾಜ್ಯಪಾಲ ಭಾರದ್ವಾಜ್, ಅನಂತ್ ಕುಮಾರ್, ಅಶೋಕ್ ಇವರೆಲ್ಲ ಸೇರಿಕೊಂಡು ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಒಳಸಂಚು ನಡೆಸಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ವಿಶ್ವನಾಥ್ ಹೈಕೋರ್ಟ್ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆದರೆ ವಿಶ್ವನಾಥ್ ಸಲ್ಲಿಸಿರುವ ದೂರಿನ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರ ಕೊಟ್ಟಿಲ್ಲ. ವಿವಿಧ ಪತ್ರಿಕೆಗಳಲ್ಲಿ ಬಂದ ವರದಿಯನ್ನೇ ಆಧರಿಸಿ ದೂರು ನೀಡಿದ್ದರು.

ವೆಬ್ದುನಿಯಾವನ್ನು ಓದಿ