ಸದಾನಂದ ಗೌಡರನ್ನು ಕೆಳಗಿಳಿಸಲು ಬಿಜೆಪಿಯಲ್ಲೇ ಷಡ್ಯಂತ್ರ

ಶನಿವಾರ, 10 ಡಿಸೆಂಬರ್ 2011 (10:17 IST)
PTI
ರಾಜ್ಯ ರಾಜಕೀಯದಲ್ಲಿ ಮತ್ತೆ ತಿರುವು ಪಡೆದುಕೊಳ್ಳುತ್ತಿದ್ದು, ಸದಾನಂದಗೌಡರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿಯಲ್ಲಿಯೇ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸದಾನಂದ ಗೌಡರಿಗೆ ಈ ಬೆಳವಣಿಗೆಯಿಂದ ಭ್ರಮ ನಿರಸನವಾಗಿದೆ ಎನ್ನಲಾಗಿದೆ.

ಸದಾನಂದಗೌಡರು ವಿಧಾನಪರಿಷತ್‌ಗೆ ಪ್ರವೇಶ ಪಡೆಯದಿದ್ದರೆ ಅವರು ಮುಖ್ಯಮಂತ್ರಿ ಹುದ್ದೆಗೆ ಫೆಬ್ರವರಿ ತಿಂಗಳಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ.ಅದಕ್ಕೂ ಮೊದಲು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಲು ತಯಾರಿ ನಡೆದಿದೆ.
ಯಡಿಯೂರಪ್ಪ ಬೆಂಬಲಿಗರು ಕಳೆದ ಎರಡು ದಿನಗಳಿಂದ ಶಾಸಕರ ಬೆಂಬಲ ಕ್ರೋಡೀಕರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ

ರಾಜ್ಯ ಬಿಜೆಪಿ ವಲಯದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಲ್ಲಿ, ಸದಾನಂದ ಗೌಡರು ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಮುಂದುವರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಒಂದಾಗಿ ಸೇರಿ ಸರಕಾರ ಉರುಳಿಸುವ ಸಂಚು ನಡೆಸಿದ್ದಾರೆ ಎನ್ನುವ ವದಂತಿಗಳನ್ನು ಯಡ್ಡಿ ಬೆಂಬಲಿಗರು ಹರಡಿಸುತ್ತಿದ್ದಾರೆ. ಸರಕಾರ ಉಳಿಸಿಕೊಳ್ಳಬೇಕಾದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಯಡ್ಡಿ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸದಾನಂದ ಗೌಡರು ವಿಧಾನಪರಿಷತ್‌ಗೆ ನಾಮಪತ್ರ ಸಲ್ಲಿಸಲು 10 ಶಾಸಕರ ಸಹಿ ಅಗತ್ಯವಿದೆ. ಆದರೆ , ಶಾಸಕರಿಗೆ ಸಹಿ ಮಾಡದಂತೆ ಯಡಿಯೂರಪ್ಪ ಬೆಂಬಲಿಗರಾದ ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ನಿರಾಣಿ ಮತ್ತು ಬಸವರಾಜ್ ಬೊಮ್ಮಾಯಿ ಒತ್ತಡ ಹೇರುತ್ತಿದ್ದಾರೆ ಎಂದು ಬಿಜೆಪಿ ವಲಯದಲ್ಲಿಯೇ ಅಸಮಾಧಾನದ ಹೊಗೆಯಾಡುತ್ತಿದೆ.

ವೆಬ್ದುನಿಯಾವನ್ನು ಓದಿ