ಪ್ಲೀಸ್ ತಾಯಿ ತಿಥಿಗೆ ಹೋಗ್ಬೇಕು; ಜನಾರ್ದನ ರೆಡ್ಡಿ ಜಾಮೀನಿಗೆ ನಕಾರ

ಶುಕ್ರವಾರ, 30 ಡಿಸೆಂಬರ್ 2011 (16:03 IST)
PR
ತಾಯಿಯ ವಾರ್ಷಿಕ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನಾಂಪಲ್ಲಿಯ ಸಿಬಿಐ ವಿಶೇಷ ಕೋರ್ಟ್ ಶುಕ್ರವಾರ ಮತ್ತೆ ತಿರಸ್ಕರಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಡಿಸೆಂಬರ್ 31ರಂದು ತಾಯಿಯ ತಿಥಿಯ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಜನಾರ್ದನ ರೆಡ್ಡಿ ಸಿಬಿಐ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದರ ಜತೆಗೆ ಅವರ ಬಾವ ಬಿ.ವಿ.ಶ್ರೀನಿವಾಸ್ ರೆಡ್ಡಿ ಕೂಡ ಅರ್ಜಿ ಸಲ್ಲಿಸಿದ್ದರು.

ಆದರೆ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ್ ರೆಡ್ಡಿ ಯಾವುದೇ ಮಧ್ಯಂತರ ಜಾಮೀನು ಪಡೆಯಲು ಅರ್ಹರಲ್ಲ. ತಾಯಿಯ ತಿಥಿ ನೆಪದಲ್ಲಿ ಮಧ್ಯಂತರ ಜಾಮೀನು ಪಡೆಯುವ ಯತ್ನ ನಡೆಸಿದ್ದಾರೆ. ಹಾಗಾಗಿ ರೆಡ್ಡಿದ್ವಯರಿಗೆ ಜಾಮೀನು ನೀಡಬಾರದೆಂದು ಸಿಬಿಐ ಪರ ವಕೀಲರು ತೀವ್ರವಾಗಿ ಆಕ್ಷೇಪಣೆ ಸಲ್ಲಿಸಿದ್ದರು.

ಸಿಬಿಐ ಪರ ವಕೀಲರ ವಾದವನ್ನು ಆಲಿಸಿದ ನಾಂಪಲ್ಲಿಯ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶರು ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಆ ನಿಟ್ಟಿನಲ್ಲಿ ಜನಾರ್ದನ ರೆಡ್ಡಿಗೆ ಹೊಸವರ್ಷವನ್ನು ಜೈಲಿನಲ್ಲಿಯೇ ಆಚರಿಸಿಕೊಳ್ಳುವಂತಾಗಿದೆ.

ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ನಡೆಸಿದ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋದಡಿಯಲ್ಲಿ ರೆಡ್ಡಿದ್ವಯರನ್ನು ಸಿಬಿಐ ಕಳೆದ ಸೆಪ್ಟೆಂಬರ್ 5ರಂದು ಬಳ್ಳಾರಿಯಲ್ಲಿ ಬಂಧಿಸಿತ್ತು. ಇದೀಗ ಇಬ್ಬರೂ ಚಂಚಲಗುಡ ಜೈಲಿನಲ್ಲಿ ಕಾಲಕಳೆಯುತ್ತಿದ್ದಾರೆ.

ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರೆಡ್ಡಿಗಳ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜನವರಿಗೆ 12ರವರೆಗೆ ವಿಸ್ತರಿಸಿತ್ತು. ಇದರಲ್ಲಿ ಆಂಧ್ರಪ್ರದೇಶ ಗಣಿ ಇಲಾಖೆ ಮಾಜಿ ನಿರ್ದೇಶಕ ರಾಜಗೋಪಾಲ್ ಕೂಡ ಸೇರಿದ್ದಾರೆ.

ವೆಬ್ದುನಿಯಾವನ್ನು ಓದಿ