ಡಿನೋಟಿಫೈ ಕೇಸ್; ಕುಮಾರಸ್ವಾಮಿ, ಚೆನ್ನಿಗಪ್ಪ ವಿರುದ್ಧ ಎಫ್ಐಆರ್

ಶುಕ್ರವಾರ, 6 ಜನವರಿ 2012 (20:19 IST)
PR
ಹೊಸ ವರ್ಷದಲ್ಲಿಯೂ ಭೂ ಹಗರಣದ ಸದ್ದು ಮುಂದುವರಿದಿದ್ದು, ಅರ್ಕಾವತಿ ಬಡಾವಣೆ ನಿವೇಶನಗಳನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪದ ಸುಳಿಯಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಚೆನ್ನಿಗಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಿಆರ್‌ಪಿಸಿ ಸೆಕ್ಷನ್ 156(3)ರ ಅಡಿಯಲ್ಲಿ ತನಿಖೆ ನಡೆಸುವಂತೆ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದ ನಿಟ್ಟಿನಲ್ಲಿ ಕುಮಾರಸ್ವಾಮಿ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರದ ನಿವಾಸಿ ಮಹದೇವಸ್ವಾಮಿ ಎಂಬುವರು ದಾಖಲಿಸಿದ್ದ ಖಾಸಗಿ ದೂರಿನ ಅರ್ಜಿಯ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಕುಮಾರಸ್ವಾಮಿ, ಚೆನ್ನಿಗಪ್ಪ ಹಾಗೂ ಇನ್ನಿಬ್ಬರ ವಿರುದ್ಧ ತನಿಖೆ ನಡೆಸಿ ಫೆ.6ರಂದು ವರದಿ ನೀಡುವಂತೆ ಆದೇಶಿಸಿದ್ದರು.

ಕುಮಾರಸ್ವಾಮಿ, ಚೆನ್ನಿಗಪ್ಪ ಸೇರಿದಂತೆ ಜಮೀನಿನ ಮೂಲ ಮಾಲೀಕರಾದ ಎ.ವಿ.ರವಿಪ್ರಕಾಶ್, ಎ.ವಿ.ಶಿವರಾಮ್ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

2007ರ ಅಕ್ಟೋಬರ್‌ನಲ್ಲಿ ತಣಿಸಂದ್ರ ಗ್ರಾಮದಲ್ಲಿ 3.8ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲು ಕುಮಾರಸ್ವಾಮಿ ಆದೇಶಿಸಿದ್ದು, ಈ ಅಕ್ರಮದಲ್ಲಿ ಅಂದು ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಕೂಡ ಶಾಮೀಲಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ