ಛೇ... ನಾ ಯಡಿಯೂರಪ್ಪ ಪರ ಲಾಬಿ ನಡೆಸಲು ಹೋಗ್ಲಿಲ್ಲ: ಅಶೋಕ್

ಶನಿವಾರ, 7 ಜನವರಿ 2012 (17:57 IST)
PR
ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವುದು ಯಾರ ಪರ ವಕಾಲತ್ತು ವಹಿಸಲು ಅಲ್ಲ ಎಂದು ಗೃಹ ಸಚಿವ ಆರ್.ಅಶೋಕ್ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸಲು ದೆಹಲಿಗೆ ತೆರಳಿದ್ದೆ. ವರಿಷ್ಠರ ಭೇಟಿಯ ಸಂದರ್ಭದಲ್ಲಿ ನಾನು ಯಾರ ಪರವಾಗಲಿ, ಯಾರ ವಿರುದ್ಧವಾಗಲಿ ವಕಾಲತ್ತು ವಹಿಸಿಲ್ಲ ಎಂದು ಹೇಳಿದರು.

ನಗರದಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯ ವಿದ್ಯಮಾನಗಳೆಲ್ಲ ವರಿಷ್ಠರಿಗೆ ತಿಳಿಸಿದ್ದು, ನಾಯಕತ್ವ ಸೇರಿದಂತೆ ಇತರ ವಿಚಾರಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದರು.

ಪಕ್ಷ ಹಾಗೂ ಸರ್ಕಾರವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸದಾನಂದ ಗೌಡ ಅವರ ಮೇಲಿದೆ. ಅವರಿಬ್ಬರು ಯಾವ ದೃಷ್ಟಿಯಿಂದ ಕೆಲಸ ಮಾಡಬೇಕು ಎಂಬುದನ್ನು ವರಿಷ್ಠರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಯಡಿಯೂರಪ್ಪ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಸಂಘಟನೆಗೆ ಇನ್ನಷ್ಟು ಶ್ರಮಿಸಲಿದ್ದಾರೆ ಎಂದ ಅಶೋಕ್, ವರಿಷ್ಠರ ಭೇಟಿ ನಂತರ ಸದಾನಂದ ಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ