ಆರೆಸ್ಸೆಸ್ ಸಂಧಾನ ಏನಾಗುತ್ತೆ?; ರಹಸ್ಯ ಸ್ಥಳದಲ್ಲಿ ಯಡಿಯೂರಪ್ಪ

ಬುಧವಾರ, 11 ಜನವರಿ 2012 (16:27 IST)
PR
ತನಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಠಕ್ಕೆ ಬಿದ್ದಿರುವುದು ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರಿಗೆ ಇಕ್ಕಟ್ಟಿನ ಸ್ಥಿತಿಗೆ ತಂದಿದ್ದು, ಬುಧವಾರ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಯಡಿಯೂರಪ್ಪ ನಡುವೆ ಸಂಧಾನ ಸಭೆ ಆಯೋಜಿಸಿದೆ. ಏತನ್ಮಧ್ಯೆ ಯಡಿಯೂರಪ್ಪ ರಹಸ್ಯ ಸ್ಥಳಕ್ಕೆ ತೆರಳಿ ಹೊಸ ತಂತ್ರ ಹೆಣೆಯುತ್ತಿದ್ದಾರೆ.

ಆರ್ಎಸ್ಎಸ್ ಮುಖಂಡರ ಸಭೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಭೆಗೂ ಮುನ್ನ ಕೆಲವು ಆರ್ಎಸ್ಎಸ್ ಮುಖಂಡರ ಭೇಟಿ ಮಾಡಿದ ನಂತರ ತಮ್ಮ ನಿವಾಸದಿಂದ ಖಾಸಗಿ ಕಾರಿನಲ್ಲಿ ಮಾಧ್ಯಮದವರ ಕಣ್ತಪ್ಪಿಸಿ ರಹಸ್ಯ ಸ್ಥಳಕ್ಕೆ ತೆರಳಿದರು.

ಬುಧವಾರ ಸಂಜೆ ಆರ್ಎಸ್ಎಸ್ ಮುಖಂಡರ ಜತೆ ಸಭೆ ನಡೆಯಲಿದ್ದು, ಪ್ರಸ್ತುತ ಸಭೆಯಲ್ಲಿ ಯಡಿಯೂರಪ್ಪ ಯಾವೆಲ್ಲ ಬೇಡಿಕೆಯನ್ನೊಡ್ಡಲಿದ್ದಾರೆ ಎಂಬುದು ಸದ್ಯ ಕುತೂಹಲ ಉಂಟು ಮಾಡಿದೆ.

ಆರ್ಎಸ್ಎಸ್ ಸಭೆಗೆ ಯಡಿಯೂರಪ್ಪ, ಈಶ್ವರಪ್ಪ ಹಾಜರ್:
ಆರ್ಎಸ್ಎಸ್ ಕಚೇರಿ ಕೇಶವಕೃಪಾದಲ್ಲಿ ಸಂಧಾನ ಸಭೆ ಆರಂಭಗೊಂಡಿದ್ದು, ಸಭೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಜರಾಗಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಕ್ಕೆ ಆರ್ಎಸ್ಎಸ್ ಕಸರತ್ತು ನಡೆಸುತ್ತಿದ್ದು, ಈಗ ನಡೆಯುತ್ತಿರುವ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ