ಬಿಜೆಪಿ ಬಿರುಕಿಗೆ ಆರೆಸ್ಸೆಸ್ ತೇಪೆ: ಬಿಕ್ಕಟ್ಟಿಗೆ ತಾತ್ಕಾಲಿಕ ಶಮನ

ಗುರುವಾರ, 12 ಜನವರಿ 2012 (10:03 IST)
PR
ಆಡಳಿತಾರೂಢ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಆಂತರಿಕ ಭಿನ್ನಮತ ಶಮನಕ್ಕೆ ಮುಂದಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತಾತ್ಕಾಲಿಕ ಕದನ ವಿರಾಮ ಹಾಡುವಲ್ಲಿ ಯಶಸ್ವಿಯಾಗಿದೆ.

ಬುಧವಾರ ಇಡೀ ದಿನ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಜತೆ ಚರ್ಚಿಸಿದ ಆರೆಸ್ಸೆಎಸ್ ಪ್ರಮುಖರು ಹಿತಭೋಧನೆ ನೀಡಿದರು.

ಬಿಜೆಪಿಯೊಳಗೆ ಉಂಟಾಗಿರುವ ಭಿನ್ನಮತ, ಗಂಪುಗಾರಿಕೆ, ಬಿಕ್ಕುಟ್ಟು ತಾರಕ್ಕೇರುವುದನ್ನು ಕಂಡ ಆರೆಸ್ಸೆಸ್ ನಾಯಕರು ಸರಕಾರ ಪತನವಾಗುವ ಮುನ್ಸೂಚನೆ ಅತರಿತು ಸಂಧಾನ ಸಭೆಗೆ ಮುಂದಾಗಿದ್ದರು. ಆದರೆ ಮೇಲ್ನೊಟಕ್ಕೆ ಭಿನ್ನಮತ ಶಮನಗೊಂಡಂತೆ ಕಂಡುಬಂದಿದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಣದವರು ಸಂಧಾನ ಸೂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಂಕ್ರಾಂತಿ ಒಳಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಪರೋಕ್ಷ ಎಚ್ಚರಿಕೆ ರವಾನಿಸಿದ್ದ ಯುಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರ ನೆರವಿನಿಂದ ಒತ್ತಡದ ತಂತ್ರ ಅನುಸರಿಸುತ್ತಿದ್ದರು. ಅಲ್ಲದೆ ರಾಜ್ಯಾಧ್ಯಕ್ಷ ಈಶ್ವರಪ್ಪ ವಿರುದ್ಧ ನೇರ ಯುದ್ಧ ಸಾರಿದ್ದ ಅವರು, ತಮ್ಮ ಜೈಲುವಾಸಕ್ಕೂ ಅವರೇ ಕಾರಣರು ಎಂದು ಆಪಾದಿಸಿದ್ದರು.

ಸಂಧಾನ ಸಭೆಯಿಂದಾಗಿ ಯಡಿಯೂರಪ್ಪ ಅವರು ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಕೊಡುವಂತೆ ಸೂಚಿಸಲಾಗಿದೆ. ಯಡಿಯೂರಪ್ಪ ಹಮ್ಮಿಕೊಳ್ಳುವ ಪ್ರವಾಸವು ಪಕ್ಷದ ನೇತೃತ್ವದಲ್ಲೇ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಎಲ್ಲರು ಪರಸ್ಪರ ಹೊಂದಾಣಿಕಿಯಿಂದ ಕೆಲಸ ಮಾಡಬೇಕು. ನಿಮ್ಮಿಂದ ಪಕ್ಷ ಅಲ್ಲ. ಪಕ್ಷದಿಂದ ನೀವು ಎಂಬುದನ್ನು ಅರಿತುಕೊಳ್ಳಬೇಕು. ನಿಮ್ಮನ್ನು ಗುರುತಿಸಿ ಅವಕಾಶ ನೀಡಿದ್ದಕ್ಕಾಗಿ ನಿವೀಗ ನಾಯಕರಾಗಿದ್ದೀರಿ. ಇದರ ಹಿಂದೆ ಎಷ್ಟು ಜನರ ಪರಿಶ್ರಮವಿದೆ ಎಂಬುದನ್ನು ಅರಿತುಕೊಳ್ಳಬೇಕು. ಶಿಸ್ತಿನಿಂದ ಪಕ್ಷದಲ್ಲಿದ್ದರೆ ಎಲ್ಲವೂ ಸಿಗುತ್ತದೆ. ಇಲ್ಲದಿದ್ದಲ್ಲಿ ಏನೂ ಸಿಗಲ್ಲ ಎಂದು ನಾಯಕರನ್ನು ಎಚ್ಚರಿಸಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿ ಡಿ. ವಿ ಸದಾನಂದ ಗೌಡ ಮೌನಕ್ಕೆ ಶರಣಾಗಿದ್ದರೆ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಎಸ್. ಈಶ್ವರಪ್ಪ, ಸಚಿವರಾದ ಆರ್. ಅಶೋಕ್, ಜಗದೀಶ್ ಶೆಟ್ಟರ್, ಎಸ್. ಸುರೇಶ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ಹಾಗೂ ಆರೆಸ್ಸೆಎಸ್ ಪ್ರಮುಖರಾದ ಮೈ. ಚ. ಜಯದೇವ, ವಿ. ಸತೀಶ್, ಕೆ. ಪ್ರಭಾಕರ ಭಾಗವಹಿಸಿದ್ದರು.

ಈ ನಡುವೆ ಬಾಯಿಗೆ ಬಂದಂತೆ ಹೇಳಿಕೆ ಕೊಟ್ಟಿದ್ದ ಯಡಿಯೂರಪ್ಪ ಬೆಂಬಲಿಗರಾದ ಎಂ. ಪಿ. ರೇಣುಕಾಚಾರ್ಯ, ಸುರೇಶ್ ಗೌಡ ಹಾಗೂ. ಬಿ. ಪಿ ಹರೀಶ್ ವಿರುದ್ಧ ಟೀಕೆ ಎದ್ದಿದ್ದು, ಅನಗತ್ಯವಾಗಿ ಯಾರೂ ಕೂಡಾ ಹೇಳಿಕೆ ಕೊಡಬಾರದು ಎಂದು ಸಂಘ ಪರಿವಾರ ಎಚ್ಚರಿಸಿದೆ.

ವೆಬ್ದುನಿಯಾವನ್ನು ಓದಿ