ಸುಮ್ನೆ ಕುಳಿತುಕೊಳ್ಳಲ್ಲ-ಯಡಿಯೂರಪ್ಪ, ಗೊಂದಲ ಇದೆ:ಡೀವಿ

ಶನಿವಾರ, 21 ಜನವರಿ 2012 (09:52 IST)
ನನ್ನದು ಪಕ್ಷದಿಂದ ನಿಯೋಜಿತವಾದ ಪ್ರವಾಸವಲ್ಲ. ಹಾಗಂತ ಖಾಲಿ ಕುಳಿತುಕೊಳ್ಳುವ ಜಾಯಮಾನವಲ್ಲ. ಇನ್ನೂ ಒಂದೂವರೆ ವರ್ಷದೊಳಗೆ ಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪಕ್ಷದ ಪ್ರಚಾರಕ್ಕಾಗಿ ಎಲ್ಲ ಕ್ಷೇತ್ರಗಳಿಗೂ ಓಡಾಡುತ್ತಿದ್ದೇನೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ರೀತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಲ್ಲಿನ ನಟರಾಜ ಪ್ರತಿಷ್ಠಾನ ಮತ್ತು ಹೊಸಮಠ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಪ್ರತ್ಯೇಕ ಪಕ್ಷ ಕಟ್ಟುವ ವಿಚಾರ ನನ್ನ ಮುಂದೆ ಇಲ್ಲ. ಅಷ್ಟಕ್ಕೂ ಇಂದು ಯಾವುದೇ ಹೊಸ ಪಕ್ಷಕ್ಕೂ ಭವಿಷ್ಯವಿಲ್ಲ. ನನ್ನ ಹಾಗೂ ಈಶ್ವರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದೇ ಜಿಲ್ಲೆಯವರು ನಾವು ಅವರು ಪಕ್ಷವನ್ನು ಬಲಗೊಳಿಸುತ್ತಿದ್ದು, ನಾನು ಪ್ರಚಾರವನ್ನು ಕೈಗೊಂಡಿದ್ದೇನೆ. ಸದಾನಂದ ಗೌಡರು ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಗೊಂದಲ ಇದೆ, ಬಗೆಹರಿಸಿಕೊಳ್ತೇವೆ:ಸದಾನಂದ ಗೌಡ
ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ನಡೆಯುತ್ತಿರುವ ನಡುವೆಯೇ ಪಕ್ಷದಲ್ಲಿ ಗೊಂದಲ ಇರುವುದು ನಿಜ. ನಮ್ಮಲ್ಲಿ ಎಲ್ಲವೂ ಸರಿ ಇದೆ ಅಂತ ನಾ ಹೇಳಲ್ಲ. ಆದರೆ ಆರ್ಎಸ್ಎಸ್ ಮುಖಂಡರು ಸಮಸ್ಯೆ ಇತ್ಯರ್ಥಕ್ಕೆ ಮುಂದಾದರೂ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ತಿಳಿಸಿದ್ದಾರೆ.

ನಂಜನಗೂಡು ತಾಲೂಕು ಸುತ್ತೂರು ಶಿವರಾತ್ರೀಶ್ವರ ಜಾತ್ರಾ ಉತ್ಸವದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಯಾವತ್ತೂ ಹಸ್ತಕ್ಷೇಪ ಮಾಡಿಲ್ಲ. ಅವರು ಪಕ್ಷದ ಹಿರಿಯ ನಾಯಕರು. ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಅಧಿಕಾರ ಅವರಿಗೆ ಇದೆ ಎಂದರು.

ನಮ್ಮಲ್ಲಿನ ಗೊಂದಲಗಳ ಬಗ್ಗೆ ಪಕ್ಷದ ವರಿಷ್ಠರು ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ಹಾಗಾಗಿ ಸಮಸ್ಯೆ ಕೂಡಲೇ ಇತ್ಯರ್ಥವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ