ಉಪಲೋಕಾಯುಕ್ತರ ನೇಮಕ: ಯಡ್ಡಿ-ಡಿವಿಎಸ್ ಮಧ್ಯೆ ವಾಗ್ವಾದ

ಸೋಮವಾರ, 23 ಜನವರಿ 2012 (10:38 IST)
PR
ಮುಖ್ಯಮಂತ್ರಿ ಸದಾನಂದ ಗೌಡರ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಮಧ್ಯೆ ಭಿನ್ನಾಭಿಪ್ರಾಯಗಳು ತಾರಕಕ್ಕೇರುತ್ತಿವೆ. ಕೋರ್ ಕಮಿಟಿ ಸಭೆಯಲ್ಲಿ ಉಭಯರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸದಾನಂದಗೌಡರು ಉಪಲೋಕಾಯುಕ್ತರ ನೇಮಕದಲ್ಲಿ ಯಡಿಯೂರಪ್ಪನವರ ಸಲಹೆ ಪಡೆಯದೆ ನೇಮಕ ಮಾಡಿರುವುದು ಪರಸ್ಪರರ ತಿಕ್ಕಾಟಕ್ಕೆ ಕಾರಣವಾಗಿದೆ.

ಉಪಲೋಕಾಯುಕ್ತರಾಗಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ನೇಮಕದ ಆದೇಶ ಹೊರಬೀಳುತ್ತಿದ್ದಂತೆ ಯಡಿಯೂರಪ್ಪ ಕೆರಳಿ ಕೆಂಡವಾಗಿ ತಮ್ಮ ಅಸಮಾಧಾನವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಗೌಡರು ರಾಜಭವನದಲ್ಲಿ ನಡೆದ ಉಪಲೋಕಾಯುಕ್ತರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರುಹಾಜರಾಗಿದ್ದಾರೆ ಎನ್ನಲಾಗಿದೆ.

PR
ನಾನು ಸನ್ಯಾಸಿಯಲ್ಲ, ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಯಡಿಯೂರಪ್ಪ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಅವರ ಬೆಂಬಲಿಗರು ಬಹಿರಂಗವಾಗಿ ಯಡಿಯೂರಪ್ಪ ಶೀಘ್ರದಲ್ಲಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿರುವುದು ಸರಿಯೇ ಎಂದು ಸದಾನಂದಗೌಡರು ಕೋರ್ ಕಮಿಟಿ ಸಭೆಯಲ್ಲಿ ಯಡ್ಡಿ ಬೆಂಬಲಿಗರ ವಿರುದ್ಧ ಹರಿಹಾಯ್ದಿದ್ದಾರೆ.

ಅಧಿಕಾರದ ವ್ಯಾಮೋಹ ನನಗಿಲ್ಲ. ಪಕ್ಷದ ವರಿಷ್ಠರು ಮತ್ತು ಸಂಘಪರಿವಾರದವರು ಹೇಳಿದಲ್ಲಿ ಯಾವುದೇ ಕ್ಷಣ ರಾಜೀನಾಮೆ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಯಡ್ಡಿ ಪಟಾಲಂ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ