ಆರೆಸ್ಸೆಸ್ ಚಡ್ಡಿ ಹಾಕಿದವರಷ್ಟೆ ಹಿಂದೂಗಳಲ್ಲ: ಕುಮಾರ

ಮಂಗಳವಾರ, 24 ಜನವರಿ 2012 (19:48 IST)
PR
ಆರೆಸ್ಸೆಸ್‌ನ ಖಾಕಿ ಚಡ್ಡಿ ಹಾಕಿದವರಷ್ಟೆ ಹಿಂದೂಗಳಲ್ಲ. ಆರೆಸ್ಸೆಸ್ ಸಂಘಟನೆ ಹಿಂದಿನಿಂದಲೂ ಸ್ವಾರ್ಥ ಸಾಧನೆಗಾಗಿ ಹಲವರನ್ನು ಬಲಿತೆಗೆದುಕೊಂಡಿದೆ. ಇಂತಹ ಸಮಾವೇಶಗಳಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ರಾಜಕೀಯ ಮತ್ತು ಅಧಿಕಾರದ ತೀಟೆಗಾಗಿ ಮುಗ್ಧ ಜನರೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಆರೆಸ್ಸೆಸ್‌ಗೆ ಸಲಹೆ ನೀಡಿದ್ದಾರೆ.

ಹಿಂದೂಗಳಿಗೆ ನಿಮ್ಮ ತಂತ್ರಗಳು ಸ್ವಾರ್ಥ ಸಾಧನೆಗಳು ಗೊತ್ತಾಗಿವೆ. ಮುಗ್ಧ ಜನರ ಭಾವನೆಗಳನ್ನು ಕೆರಳಿಸಿ ಬೇಳೆ ಬೇಯಿಸಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಚುನಾವಣೆಗಳು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ುರಾಲೋಚನೆಯಿಂದಾಗಿ ನಗರದಲ್ಲಿ ಜ.27ರಿಂದ ಮೂರು ದಿನಗಳ ಕಾಲ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮವನ್ನು ಆರೆಸ್ಸೆಸ್ ಆಯೋಜಿಸಿದೆ ಎಂದು ಟೀಕಿಸಿದರು.

ಬಿಜಾಪುರದ ಸಿದಗಿ ಮತ್ತು ಉಪ್ಪಿನಂಗಡಿಯಲ್ಲಿ ಕೋಮು ಸಂಘರ್ಷದ ವಾತಾವರಣ ಉಂಟು ಮಾಡಲು ಆರೆಸ್ಸೆಸ್ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸಿದಗಿಯಲ್ಲಿ ಪಾಕ್ ಧ್ವಜ ಹಾರಿಸಿ ಕೋಮು ಸೌಹಾರ್ದತೆಯನ್ನು ಕೆಡಿಸುವ ಸಂಚು ರೂಪಿಸಿದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ