ಹೆಲಿಕಾಪ್ಟರ್, ಕಾರು ವಾಪಸ್ ಕೊಡಿ: ಜನಾರ್ದನ ರೆಡ್ಡಿ ಕೋರ್ಟ್ ಮೊರೆ

ಶುಕ್ರವಾರ, 10 ಫೆಬ್ರವರಿ 2012 (20:36 IST)
PR
ಐಶಾರಾಮಿ ಜೀವನ ನಡೆಸಿದ್ದ ಬಳ್ಳಾರಿಯ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೈದರಾಬಾದ್ ಚಂಚಲಗುಡ ಜೈಲಿನಲ್ಲಿ ಕಾಲಕಳೆಯುತ್ತಿದ್ದ ಅವರೀಗ ತಮ್ಮ ಹೆಲಿಕಾಪ್ಟರ್ ಮತ್ತು ದುಬಾರಿ ಕಾರುಗಳನ್ನು ಸಿಬಿಐ ಸುಪರ್ದಿಯಿಂದ ತಮಗೆ ಕೊಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಹೆಲಿಕಾಪ್ಟರ್, ಕಾರುಗಳನ್ನು ಸಿಬಿಐಯಿಂದ ತಮ್ಮ ವಶಕ್ಕೆ ನೀಡುವಂತೆ ಕೋರಿ ಜನಾರ್ದನ ರೆಡ್ಡಿ ಅವರು ಹೈದರಬಾದ್ ನಾಂಪಲ್ಲಿಯ ಸಿಬಿಐ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದು, ಸೋಮವಾರ ಅರ್ಜಿಯ ವಿಚಾರಣೆ ನಡೆಯಲಿದೆ.

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬೆಲ್ 407 ಹೆಲಿಕಾಪ್ಟರ್ ಸಿಬಿಐ ವಶದಲ್ಲಿದ್ದರೂ ನಿರ್ವಹಣೆ ವೆಚ್ಚ ಭರಿಸಬೇಕಾಗಿದೆ. ನಿರಂತರ ಬಳಕೆ ಮತ್ತು ನಿರ್ವಹಣೆ ಮಾಡದಿದ್ದರೆ ಹೆಲಿಕಾಪ್ಟರ್ ತುಕ್ಕು ಹಿಡಿಯಲಿದೆ ಎಂಬ ಆತಂಕವನ್ನು ಅರ್ಜಿಯಲ್ಲಿ ವ್ಯಕ್ತಪಡಿಸಲಾಗಿದೆ.

ಹೆಲಿಕಾಪ್ಟರ್‌ಗಾಗಿ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 10.31 ಲಕ್ಷ ರೂ. ಪಾವತಿಸಬೇಕು. ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣಕ್ಕೆ ಪ್ರತಿ ತಿಂಗಳು 75 ಸಾವಿರ ರೂ. ತಂಗುದಾಣದ ಮುಂಗಡ ಹಣ ತುಂಬಬೇಕು. ಹೆಲಿಕಾಪ್ಟರ್ ಪೈಲಟ್‌ಗೆ 5 ಲಕ್ಷ ರೂ. ಮಾಸಿಕ ವೇತನ ಪಾವತಿಸಬೇಕು. ಇಷ್ಟೆಲ್ಲಾ ನಿರ್ವಹಣೆ ಅಗತ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಸಿಬಿಐ ಜಪ್ತಿ ಮಾಡಿರುವ ಹೆಲಿಕಾಪ್ಟರ್ ಅನ್ನು ತಮ್ಮ ವಶಕ್ಕೆ ನೀಡುವಂತೆ ರೆಡ್ಡಿ ಅರ್ಜಿಯಲ್ಲಿ ಕೋರಿದ್ದಾರೆ.

ಅಷ್ಟೇ ಅಲ್ಲ 5 ಐಶಾರಾಮಿ ಕಾರುಗಳೂ ಸಿಬಿಐ ವಶದಲ್ಲಿದೆ. ಇವುಗಳನ್ನು ಮರಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಹೈದರಬಾದ್ ಸಿಬಿಐ ಅಧಿಕಾರಿಗಳು ಬಳ್ಳಾರಿಯ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಸೇರಿದಂತೆ ಹೆಲಿಕಾಪ್ಟರ್, ಬೆಲೆ ಬಾಳುವ ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ