'70ನೇ ಬರ್ತ್‌ಡೇ'ಯಲ್ಲಿ ಮನದಾಳ ಬಿಚ್ಚಿಟ್ಟ ಯಡಿಯೂರಪ್ಪ

ಸೋಮವಾರ, 27 ಫೆಬ್ರವರಿ 2012 (16:37 IST)
PR
'ಮಾಧ್ಯಮದವರು ನನ್ನ ನಡೆ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ. ಬಹಳಷ್ಟು ವಿಚಾರವನ್ನು ನಾನು ರಾಜ್ಯದ ಜನತೆ ಮುಂದೆ ತೆರೆದಿಡಬೇಕಾಗಿದೆ. ನನಗೆ ಆತ್ಮರಕ್ಷಣೆಯ ಆಟವೂ ಗೊತ್ತು, ಆಕ್ರಮಣಕಾರಿ ಆಟವೂ ಗೊತ್ತು. ನಾನೇ ಕಟ್ಟಿ ಬೆಳೆಸಿದ ಪಕ್ಷವನ್ನು ನಾನು ಬಿಡುವ ಪ್ರಶ್ನೆಯೇ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸೋಮವಾರ ಮೆಜೆಸ್ಟಿಕ್ ಸಮೀಪದ ತೋಟದಪ್ಪ ಛತ್ರದಲ್ಲಿ ಹಿಂದುಳಿದ ವರ್ಗಗಳ ವೇದಿಕೆ ಆಯೋಜಿಸಿರುವ ಬಿಎಸ್‌ವೈ 70ನೇ ಹುಟ್ಟುಹಬ್ಬದ ಸಮಾವೇಶದಲ್ಲಿ ಅವರು ತಮ್ಮ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.

ನಾನೀಗ ಅಧಿಕಾರ ಕಳೆದುಕೊಂಡು ಸಾಮಾನ್ಯ ಶಾಸಕನಾಗಿದ್ದೇನೆ. ಆದರೆ ನಾನು ಅಧಿಕಾರದಲ್ಲಿದ್ದಾಗ ರೈತರ, ನೇಕಾರರ ಕಣ್ಣೀರು ಒರೆಸಿದ್ದೇನೆ. ನನ್ನ ಜನಪ್ರಿಯತೆ ವಿಪಕ್ಷಗಳಿಗೆ ಸಹಿಸಲು ಆಗಿಲ್ಲ. ಅದಕ್ಕಾಗಿಯೇ ನನ್ನ ಸಿಎಂ ಪಟ್ಟದಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸಿದರು. ಏನೇ ಆದರೂ ನಾನು ಬಸವಣ್ಣ, ಬುದ್ಧ, ಗಾಂಧಿ ಹಾಗೂ ಅಂಬೇಡ್ಕರ್ ಹಾದಿಯಲ್ಲಿ ನಡೆಯುವೆ ಎಂದು ಭರವಸೆ ನೀಡಿದರು.

ಅಪ್ಪ-ಮಕ್ಕಳ ಬಣ್ಣ ಬಯಲು ಮಾಡ್ತೇನೆ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನನಗೆ ಆಮಿಷವೊಡ್ಡಿದ್ದರು. ಆದರೆ ಅವರ ಷರತ್ತುಗಳಿಗೆ ನಾನು ಒಪ್ಪಿರಲಿಲ್ಲವಾಗಿತ್ತು. ಒಪ್ಪಿದ್ದರೆ ನಾನು ಸಿಎಂ ಆಗಬಹುದಿತ್ತು. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಸುವುದೇ ತನ್ನ ಸಂಕಲ್ಪ ಎಂದು ಗೌಡರು ಹೇಳಿದ್ದರು ಎಂದು ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದರು.

ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಅಪ್ಪ-ಮಕ್ಕಳ ಬಣ್ಣ ಬಯಲು ಮಾಡುತ್ತೇನೆ. ನಾನು ಸಿಎಂ ಆಗಬೇಕೆಂದು ಕನಸು ಕಂಡಿರಲಿಲ್ಲ. ಆದರೆ ಜನಪ್ರಿಯ ಬಜೆಟ್ ಮಂಡನೆಗೆ ಸಿಎಂ ಆಗಬೇಕೆಂದು ಹೇಳಿದ್ದೆ. ಅದರಂತೆ ನಾಲ್ಕಾರು ತಿಂಗಳಲ್ಲಿ ಮುಖ್ಯಮಂತ್ರಿ ಮಾಡುವುದಾಗಿ ಹೈಕಮಾಂಡ್ ಭರವಸೆ ನೀಡಿತ್ತು. ಆ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಗದ್ದುಗೆ ನೀಡಿ ಅಂತ ದೆಹಲಿಗೆ ಹೋಗಿ ಅಂಗಲಾಚುವುದಿಲ್ಲ ಎಂದರು.

ಹಾಗಂತ ಯಡಿಯೂರಪ್ಪನಿಗೆ 70 ವರ್ಷವಾಗಿದೆ ಏನ್ ಮಾಡಬಹುದು ಅಂತ ತಿಳಿಯಬೇಡಿ ದೇವೇಗೌಡರೇ, ಈ ಯಡಿಯೂರಪ್ಪ ಸುಲಭವಾಗಿ ಬಿಡುತ್ತಾನೆ ಅಂತ ತಿಳಿದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಅಪ್ಪ-ಮಕ್ಕಳ ತಾಳಕ್ಕೆ ಕುಣಿಯಲಿಲ್ಲ ಅಂತ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಿದರು. ರಾಜ್ಯಪಾಲರು ಕೂಡ ಮೂರು ಬಾರಿ ಸರ್ಕಾರ ವಜಾಗೊಳಿಸಲು ಯತ್ನಿಸಿದ್ದರು. ವಿಶ್ವಾಸದ್ರೋಹಿಗಳಿಂದ ಸಾಕಷ್ಟು ಪಾಠ ಕಲಿತಿರುವೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವೆ. ಅಪ್ಪ-ಮಕ್ಕಳು ಮತ್ತೆಂದೂ ಅಧಿಕಾರಕ್ಕೇರದಂತೆ ಮಾಡುವುದೇ ತನ್ನ ಗುರಿ ಎಂದು ಶಪಥ ಮಾಡಿದರು.

ಕಳೆದ 40 ವರ್ಷಗಳಿಂದ ಪಕ್ಷ ಕಟ್ಟಿದ್ದೇನೆ. ವಿಧಾನಸೌಧದಲ್ಲಿ ಕುಳಿತು ಅನುಭವ ಪಡೆದಿದ್ದೇನೆ. ನನ್ನ ಅನುಭವ ರಾಜ್ಯದ ಕಲ್ಯಾಣಕ್ಕೆ ಉಪಯೋಗವಾಗಬೇಕಿದೆ. ಮತ್ತೆ ಹೋರಾಟ ಮಾಡಿ, ಪಕ್ಷದಲ್ಲಿನ ಪ್ರಾಮಾಣಿಕರಿಗೆ ಉತ್ತಮ ಸ್ಥಾನಮಾನ ಕಲ್ಪಿಸಿಕೊಡುವೆ. ಆದರೆ ಮುಖ್ಯಮಂತ್ರಿ ಸದಾನಂದ ಗೌಡರು ಅಪ್ಪ-ಮಕ್ಕಳ ಸಲಹೆ ಕೇಳಲು ಹೋಗಬೇಡಿ ಎಂದು ಈ ಸಂದರ್ಭದಲ್ಲಿ ವಿನಂತಿ ಮಾಡಿಕೊಂಡರು.

ವೆಬ್ದುನಿಯಾವನ್ನು ಓದಿ