ಡೀವಿ ಕೆಳಗಿಳಿಯಲಿ,ಬಹುಮತ ಇರೋರು ಸಿಎಂ ಆಗ್ಲಿ: ಯಡಿಯೂರಪ್ಪ

ಮಂಗಳವಾರ, 20 ಮಾರ್ಚ್ 2012 (11:53 IST)
PR
ರಾಜ್ಯ ರಾಜಕೀಯದಲ್ಲಿನ ನಾಯಕತ್ವ ಕುರಿತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿಯವರು ಮಂಗಳವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ದೂರವಾಣಿ ಕರೆ ಮೂಲಕ ಇಂದಿನಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವಂತೆ ನೀಡಿರುವ ಸಲಹೆಯನ್ನು ತಿರಸ್ಕರಿಸಿದ್ದು, ಕೆಲವೊಂದು ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಜೆಟ್ ಅಧಿವೇಶನದ ನಂತರ ಬಿಕ್ಕಟ್ಟು ಬಗೆ ಹರಿಸುವುದಾಗಿ ಅರುಣ್ ಜೇಟ್ಲಿಯವರು ಯಡಿಯೂರಪ್ಪನವರಿಗೆ ಭರವಸೆ ನೀಡಿದ್ದಾರೆನ್ನಲಾಗಿದೆ. ನೀವು ಇಂದಿನಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಿ. ರೆಸಾರ್ಟ್‌ ರಾಜಕೀಯ ಮಾಡಿ ಬಿಕ್ಕಟ್ಟು ಸೃಷ್ಟಿಸಬೇಡಿ ಎಂದು ಮನವಿ ಮಾಡಿಕೊಂಡರೂ ಯಡಿಯೂರಪ್ಪ ಅವರ ಸಲಹೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ಮೊದಲು ಶಾಸಕಾಂಗ ಸಭೆ ನಡೆಸುವ ದಿನಾಂಕವನ್ನು ಇಂದೇ ಘೋಷಿಸಬೇಕು. ಸಭೆಯ ಹಿಂದಿನ ದಿನ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸದನದಲ್ಲಿ ಯಾರಿಗೆ ಹೆಚ್ಚು ಬಹುಮತ ಇರುತ್ತೋ ಅವರು ಮುಖ್ಯಮಂತ್ರಿ ಆಗಬೇಕು...ಈ ಎಲ್ಲಾ ಷರತ್ತುಗಳಿಗೆ ಒಪ್ಪಿದರೆ ಮಾತ್ರ ತಾನು ಬಜೆಟ್ ಅಧಿವೇಶನದಲ್ಲಿ ಭಾಗಿವಹಿಸುವುದಾಗಿ ಯಡಿಯೂರಪ್ಪ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ಹೇಳಿರುವುದಾಗಿ ಖಾಸಗಿ ಚಾನೆಲ್ ವರದಿ ಮಾಡಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರು ಸೋಮವಾರ ನಾಗಪುರಕ್ಕೆ ಬನ್ನಿ ಎಂದು ಯಡಿಯೂರಪ್ಪನವರಿಗೆ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರು. ಅಲ್ಲದೇ ರಾಜ್ಯದ 13 ಸಂಸದರು ಕೂಡ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡುವಂತೆ ಸಹಿ ಹಾಕಿದ ಪತ್ರವನ್ನು ನೀಡಿ ಒತ್ತಡ ಹೇರಿದ್ದರು. ಇಂದು ಅರುಣ್ ಜೇಟ್ಲಿಯವರು ಯಡಿಯೂರಪ್ಪ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಆದರೆ ಯಡಿಯೂರಪ್ಪ ಮತ್ತು ಬಣ ಯಾವುದೇ ಮಾತುಕತೆಗೆ ಒಪ್ಪದೆ, ಮೊದಲು ಕೊಟ್ಟ ಮಾತಿನಂತೆ ಸದಾನಂದ ಗೌಡರನ್ನು ಗದ್ದುಗೆ ಕೆಳಗಿಳಿಸಿ, ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡಿ ಎಂದು ಪಟ್ಟು ಹಿಡಿದಿರುವುದು ಬಿಜೆಪಿ ಹೈಕಮಾಂಡ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ವೆಬ್ದುನಿಯಾವನ್ನು ಓದಿ