ಎಲ್ಲೂ ಹೋಗಲ್ಲ ನಾನು ಕೆಜೆಪಿಗೆ ಹೋಗಲ್ಲ: ಉಮೇಶ್ ಕತ್ತಿ

ಶುಕ್ರವಾರ, 29 ಮಾರ್ಚ್ 2013 (15:14 IST)
PR
PR
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರೆಂದೇ ಪರಿಗಣಿಸಲಾಗಿದ್ದ ತೋಟಗಾರಿಕಾ ಸಚಿವ ಉಮೇಶ್ ಕತ್ತಿ ಮಾರ್ಚ್ 30 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶದಲ್ಲಿ ಯಡಿಯೂರಪ್ಪನವರ ಕೆಜೆಪಿ ಸೇರ್ಪಡೆಗೊಳ್ಳುವರೆಂದು ಹೇಳಲಾಗುತ್ತಿದ್ದ ಮಧ್ಯೆ ಇಂದು ಬೆಂಬಲಿಗರ ಜೊತೆ ಚರ್ಚೆ ನಡೆಸಿದ ಉಮೇಶ್ ಕತ್ತಿ ಬಿಜೆಪಿ ತೊರೆಯದಿರಲು ನಿರ್ಧರಿಸಿದ್ದಾರೆ.

ಇಂದು ಬೆಳಗಿನಿಂದಲೂ ತಮ್ಮ ಬೆಂಬಲಿಗರು, ಅಭಿಮಾನಿಗಳ ಜೊತೆ ಸರಣಿ ಸಭೆ ನಡೆಸಿದ ಉಮೇಶ್ ಕತ್ತಿಯವರು ನಂತರ ಬೆಂಬಲಿಗರ ಸೂಚನೆಯಂತೆ ಬಿಜೆಪಿಯಲ್ಲೇ ಮುಂದುವರಿಯಲು ತೀರ್ಮಾನಿಸಿದರು. ಈ ಬಾರಿಯ ವಿಧಾನಸಭಾ ಚುನವಣೆಯಲ್ಲಿ ಬಿಜೆಪಿಯಿಂದಲೇ ಕಣಕ್ಕಿಳಿಯಲು ನಿರ್ಧರಿಸಿದರು.

ಉಮೇಶ್ ಕತ್ತಿ ತಮ್ಮ ನೇತೃತ್ವದ ಕೆಜೆಪಿಗೆ ಸೇರ್ಪಡೆಗೊಳ್ಳುವರೆಂದೇ ಯಡಿಯೂರಪ್ಪನವರು ನಂಬಿಕೊಂಡಿದ್ದರು. ಇದೀಗ ಉಮೇಶ್ ಕತ್ತಿ ದಿಢೀರ್ ಯು ಟರ್ನ್ ತೆಗೆದುಕೊಂಡಿರುವುದರಿಂದ ಕೋಪಗೊಂಡಿರುವ ಅವರು, ಯಾರನ್ನೂ ನಂಬಿಕೊಂಡು ನಾನು ಕೆಜೆಪಿ ನೇತೃತ್ವ ವಹಿಸಿಕೊಂಡಿಲ್ಲ ಎಂದು ಗುಡುಗಿದ್ದಾರೆ.

ಮತ್ತಿಬ್ಬರು ಯಡಿಯೂರಪ್ಪ ಬೆಂಬಲಿಗ ಸಚಿವರಾದ ಮುರುಗೇಶ್ ನಿರಾಣಿ ಹಾಗೂ ಬಸವರಾಜ ಬೊಮ್ಮಾಯಿಯವರೂ ಸಹ ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರ್ಪಡೆಗೊಳ್ಳುವುದು ಅನಿಶ್ಚಿತವಾಗಿದ್ದು, ಮೂರ್ನಾಲ್ಕು ದಿನಗಳೊಳಗಾಗಿ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.

ವೆಬ್ದುನಿಯಾವನ್ನು ಓದಿ