ಬೆಂಗಳೂರಿಗೆ ಬರುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡು 6 ಜನರ ಸಜೀವ ದಹನ
ಬುಧವಾರ, 16 ಏಪ್ರಿಲ್ 2014 (10:45 IST)
PR
PR
ಚಿತ್ರದುರ್ಗ:ದಾವಣಗೆರೆಯಿಂದ ಬೆಂಗಳೂರಿಗೆ ಬರುತ್ತಿದ್ದ ಎಸ್‌ಪಿಆರ್ ಸ್ಲೀಪರ್ ಕೋಚ್ ಬಸ್ ಚಿತ್ರದುರ್ಗದ ಹಿರಿಯೂರಿನ ಮೇಟಿಕುರ್ಕಿ ಬಳಿ ಬೆಂಕಿಗಾಹುತಿಯಾಗಿದ್ದು, 6 ಜನರು ಸಜೀವ ದಹನಗೊಂಡ ಭೀಕರ ದುರಂತ ಸಂಭವಿಸಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೊದಲು ಡಿವೈಡರ್‌ಗೆ ಬಸ್ ಡಿಕ್ಕಿಹೊಡೆದು ಪಲ್ಟಿ ಹೊಡೆದ ಬಳಿಕ ಬೆಂಕಿಹೊತ್ತಿಕೊಂಡು ಧಗ ಧಗ ಉರಿದು ಸಂಪೂರ್ಣ ಸುಟ್ಟುಹೋಗಿದೆ.
ಈ ದುರ್ಘಟನೆ ಬಳಿಕ ಚಾಲಕ ಮತ್ತು ಕ್ಲೀನರ್ ಅಪಘಾತದ ಸ್ಥಳದಿಂದ ಪರಾರಿಯಾಗಿದ್ದಾರೆ. ಬಸ್ ಮುಂಭಾಗದಲ್ಲಿ ಬಾಗಿಲು ತೆರೆದಿದ್ದ ಸಂದರ್ಭದಲ್ಲಿ ಕೆಲವರು ತಪ್ಪಿಸಿಕೊಂಡರು. ಹಿಂಭಾಗದಲ್ಲಿ ಎಕ್ಸಿಟ್ ಡೋರ್ ಗಾಜನ್ನು ಒಡೆದು ಕೆಲವರು ಪಾರಾಗಿದ್ದಾರೆ. 13 ಮಂದಿ ಪ್ರಯಾಣಿಕರಿಗೆ ಸಣ್ಣ, ಪುಟ್ಟ ಗಾಯವಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಚಾಲಕನ ನಿರ್ಲಕ್ಷ್ಯ, ಅತಿ ವೇಗವೇ ದುರಂತಕ್ಕೆ ಕಾರಣವೆಂದು ಹೇಳಲಾಗಿದೆ. ಮೃತರ ದೇಹಗಳು ಸಂಪೂರ್ಣ ಸುಟ್ಟುಹೋಗಿರುವುದರಿಂದ ಡಿಎನ್‌ಎ ಪರೀಕ್ಷೆಯ ನಂತರ ಮತೃತರ ದೇಹಗಳನ್ನು ಗುರುತಿಸಬೇಕಾಗಿದೆ.
ಬಸ್ಸಿನಲ್ಲಿ ಒಟ್ಟು 29 ಪ್ರಯಾಣಿಕರಿದ್ದು ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರು ದುರಂತದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹರಡಿರಬಹುದೆಂದು ಭಾವಿಸಲಾಗಿದೆ. ಬೆಂಗಳೂರಿನಲ್ಲಿರುವ ಎಸ್‌ಪಿಆರ್ ಕಚೇರಿ ಬಾಗಿಲನ್ನು ತೆರೆದಿದ್ದರೂ ಅಲ್ಲಿ ಯಾವುದೇ ಮಾಹಿತಿ ನೀಡುವವರು ಯಾರೂ ಇರಲಿಲ್ಲ. ಎಸ್‌ಪಿಆರ್ ಟ್ರಾವಲ್ಸ್‌ನಲ್ಲಿದ್ದ ಪ್ರಯಾಣಿಕರ ಸಂಬಂಧಿಕರು ಮಾಹಿತಿಗಾಗಿ ಈ ಕಚೇರಿಯನ್ನು ಸಂಪರ್ಕಿಸಿದರೂ ಯಾವುದೇ ಮಾಹಿತಿ ಸಿಗುತ್ತಿಲ್ಲವೆಂದು ಹೇಳಲಾಗುತ್ತಿದೆ. ಈ ಟ್ರಾವಲ್ಸ್ ಕಂಪನಿಯ ರಿಜಿಸ್ಟ್ರೇಷನ್ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಸ್ಥಳಕ್ಕೆ ಸಮಾಜಕಲ್ಯಾಣ ಸಚಿವ ಆಂಜನೇಯ ಭೇಟಿ ಕೊಟ್ಟಿದ್ದಾರೆ.