ನೀತಿ ಸಂಹಿತೆ ಉಲ್ಲಂಘನೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಗಿದ ಬಿಸಿ

ಗುರುವಾರ, 17 ಏಪ್ರಿಲ್ 2014 (07:36 IST)
PTI
ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಕ್ಷೇತ್ರದವರಲ್ಲದ ನಾಯಕರು ಕ್ಷೇತ್ರ ತೊರೆಯಬೇಕು ಎಂಬ ನಿಯಮಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಕ್ಷೇತ್ರದಲ್ಲಿ ಬುಧವಾರ ರಾತ್ರಿವರೆಗೂ ಇದ್ದು, ಬಿಜೆಪಿ ಪ್ರತಿಭಟನೆ ನಡೆಸಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಚಾಮುಂಡೇಶ್ವರಿ ಉಪಚುನಾವಣೆ ಸಂದರ್ಭದಲ್ಲಿ ಇದೇ ಸಿದ್ದರಾಮಯ್ಯ ಅವರು ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರ ವಿರುದ್ಧ ಇದೇ ಕಾರಣಕ್ಕೆ ಪ್ರತಿಭಟನೆ ಮಾಡಿ, ಅವರು ಅಲ್ಲಿಂದ ತೆರಳುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮೈಸೂರು ಕ್ಷೇತ್ರದಲ್ಲಿದ್ದು ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ಎದುರಿಸಿದರು.

ಬುಧವಾರ ಮಧ್ಯಾಹ್ನ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾತ್ರಿಯಾದರೂ ಅಲ್ಲೇ ಇದ್ದರು. ಕೊನೇ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಅವರು ತಂತ್ರ ರೂಪಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಬಿಜೆಪಿ ಪ್ರತಿಭಟನೆಗಿಳಿಯುವ ಮೂಲಕ ಮುಖ್ಯಮಂತ್ರಿಯನ್ನು ಮೈಸೂರು ಕ್ಷೇತ್ರದಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಪದವೀಧರರಾಗಿದ್ದು, ತಿಳಿದೂ ತಿಳಿದೂ ಕಾನೂನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ, ಪ್ರತಿಭಟನೆ ಮಾಡುವತನಕ ಅವರು ಯಾವುದೇ ಕ್ರಮ ಜರುಗಿಸಿಲ್ಲ. ಧರಣಿ ಮಾಡಲು ಹೋದವರಿಗೆ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಹೇಳುವ ಅಧಿಕಾರಿಗಳಿಗೆ ಬೇರೆ ಕ್ಷೇತ್ರದವರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿರುವುದು ಗೊತ್ತಿದ್ದೂ ಸುಮ್ಮನಿದ್ದರು ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ