ನೀತಿ ಸಂಹಿತೆ ಉಲ್ಲಂಘನೆ: ನಟ ಶಿವರಾಜ್ ಕುಮಾರ್ ವಿರುದ್ಧ ದೂರು ದಾಖಲು

ಗುರುವಾರ, 17 ಏಪ್ರಿಲ್ 2014 (07:54 IST)
PR
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಟ ಶಿವರಾಜ್‌ಕುಮಾರ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.

ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ಕೆಲವು ಪದ ಬಳಕೆ ಮಾಡಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ನಗರ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. 'ಮೋದಿ ಪ್ರಧಾನಿಯಾದರೆ ದೇಶದಲ್ಲಿ ರಕ್ತಪಾತ ನಡೆಯಲಿದೆ. ಅಶಾಂತಿ ನಿರ್ಮಾಣವಾಗುತ್ತದೆ' ಎಂದು ಹೇಳಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.

ಶಿವರಾಜ್‌ಕುಮಾರ್ ವಿರುದ್ಧ: ಜೆಡಿಎಸ್ ಅಭ್ಯರ್ಥಿ ಹಾಗೂ ಪತ್ನಿ ಗೀತಾ ಪರ ಶಿವರಾಜ್‌ಕುಮಾರ್ ಅವರು ಬುಧವಾರವೂ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆ ಪ್ರಚಾರ ಮಾಡಿದ್ದರಿಂದ ಶಿವರಾಜ್‌ಕುಮಾರ್, ಗೀತಾ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರ ಮೇಲೆ ಚುನಾವಣಾ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿದ್ದಾರೆ. ಮನೆಗೆ ತೆರಳಿ ಮತಯಾಚನೆ ಮಾಡುವ ಸಂದರ್ಭದಲ್ಲಿ 5 ಜನಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಆದರೆ ಶಿವರಾಜ್‌ಕುಮಾರ್ ನೋಡಲು ಹೆಚ್ಚು ಜನ ಸೇರಿದ್ದರು.

ವೆಬ್ದುನಿಯಾವನ್ನು ಓದಿ